ಕರಾವಳಿ

ಕೊರೋನ ನೈಟ್ ಕರ್ಫ್ಯೂ ಹಿನ್ನೆಲೆ : ಶನಿವಾರ ರಾತ್ರಿ ಪೊಲೀಸರಿಂದ ವ್ಯಾಪಕ ಕಾರ್ಯಾಚರಣೆ – ಅನಗತ್ಯ ಸಂಚಾರಕ್ಕೆ ತಡೆ

Pinterest LinkedIn Tumblr

ಮಂಗಳೂರು, ಎಪ್ರಿಲ್.11 : ರಾಜ್ಯ ಸರಕಾರದ ಸೂಚನೆಯಂತೆ ದ.ಕ. ಜಿಲ್ಲಾಧಿಕಾರಿಗಳು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಪ್ರಿಲ್ 10ರಿಂದ ಕೊರೋನ ನೈಟ್ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಪೊಲೀಸರು ನಗರದಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಿದರು.

ಕೊರೊನಾ ಸೋಂಕಿನ ನಿಯಂತ್ರಣದ ಹಿನ್ನೆಲೆ ರಾಜ್ಯ ಸರ್ಕಾರದ ಆದೇಶದಂತೆ ಇಲ್ಲಿನ ಪೊಲೀಸ್ ಕಮಿಷನರೇಟ್‌ನ ವ್ಯಾಪ್ತಿಯಲ್ಲಿ ರಾತ್ರಿ ಕರ್ಫ್ಯೂ ಜಾರಿಯಾಗಿದ್ದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಶನಿವಾರ ರಾತ್ರಿ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರು.

ನಗರದ ಎಲ್ಲಾ ಕಡೆಗಳಲ್ಲಿ ರಸ್ತೆ ಮಧ್ಯೆ ಬಾರಿಕೇಡ್ ಇಟ್ಟು ರಾತ್ರಿ ಸಂಚರಿಸುವ ವಾಹನಗಳನ್ನು ತಡೆದು ವಿಚಾರಣೆ ನಡೆಸಿದರು. ಜನರು ಮತ್ತು ವಾಹನಗಳ ಅನಗತ್ಯ ಸಂಚಾರವನ್ನು ಪೊಲೀಸರು ತಡೆದರು. ರಾತ್ರಿ ಕರ್ಫ್ಯೂ ಉಲ್ಲಂಘಿಸಿದವರನ್ನು ವಿಚಾರಣೆಗೊಳಪಡಿಸಿ ಬಳಿಕ ಎಚ್ಚರಿಕೆ ನೀಡಿ ಕಳಿಸಿದರು.

ನಗರದಾದ್ಯಂತ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ವಾಹನಗಳನ್ನು ಪರಿಶೀಲಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸರು ಉತ್ಸಾಹದಿಂದ ಕರ್ಫ್ಯೂ ಜಾರಿಗೆ ಎಲ್ಲಾ ಕ್ರಮಗಳನ್ನು ಕೈಗೊಂಡರು.

ರಾತ್ರಿಪಾಳಿಯ ನೌಕರರಿಗೆ ಕೆಲವು ಷರತ್ತುಗಳ ಮೇಲೆ ಕೆಲಸಕ್ಕೆ ಹೋಗಿ ಬರಲು ಸರ್ಕಾರ ಅವಕಾಶ ಮಾಡಿಕೊಟ್ಟಿದ್ದು ”ರಾತ್ರಿಪಾಳಿಯ ಕೆಲಸಗಾರರನ್ನು ಕರೆದೊಯ್ಯುವ ಸಂಸ್ಥೆಯ ವಾಹನಗಳಲ್ಲಿ ಆ ಸಂಬಂಧ ಆಯಾ ಕಂಪನಿಗಳಿಂದ ಅಧಿಕೃತ ಪತ್ರ ಇರಬೇಕು.

ರಾತ್ರಿ ಪಾಳಿಯ ಕೆಲಸದ ಮೇಲೆ ಓಡಾಡುವ ನೌಕರರು ತಮ್ಮ ಕಂಪನಿಗಳಿಂದ ನೀಡಲಾಗಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು. ಜತೆಗೆ ಸಂಚಾರ ವೇಳೆ ಎಲ್ಲಾ ಕೊರೊನಾ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು” ಎಂದು ಈಗಾಗಲೇ ಸೂಚನೆ ನೀಡಲಾಗಿದೆ.

ಇದೆ ವೇಳೆ ಕರ್ಫ್ಯೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದ್ದರಿಂದ, ಅನೇಕ ಅಂಗಡಿ ವ್ಯಾಪಾರಿಗಳು ಹಾಗೂ ಕಾರ್ಮಿಕರು ತಮ್ಮ ಚಟುವಟಿಕೆಯನ್ನು ಎಂದಿಗಿಂತ ಮೊದಲೇ ಸ್ಥಗಿತಗೊಳಿಸಿದರು. ವ್ಯಾಪಾರಿಗಳು ಅಂಗಡಿಗಳು ಬೇಗನೇ ಮುಚ್ಚಿ ಮನೆಗೆ ತೆರಳಿದ್ದರು.

ನೈಟ್ ಕರ್ಫ್ಯೂ ಸಂದರ್ಭ ಪಾಲಿಕೆ ವ್ಯಾಪ್ತಿಯ 45 ಚೆಕ್ ಪೋಸ್ಟ್‌ಗಳಲ್ಲಿ ಪೊಲೀಸರ ನಿಯೋಜನೆ ಮಾಡಲಾಗುತ್ತದೆ. ಸುಮಾರು 480 ಪೊಲೀಸರು ಭದ್ರತೆಗಾಗಿ ನಿಯೋಜನೆ ಮಾಡಲಾಗುತ್ತದೆ. 8 ಇನ್‌ಸ್ಪೆಕ್ಟರ್‌, 40 ಸಬ್‌ಇನ್ಸ್‌ಪೆಕ್ಟರ್‌, 04 ಎಸಿಪಿಗಳು, 02 ಡಿಸಿಪಿಗಳು ಈ ಸಂದರ್ಭ ಕರ್ತವ್ಯದಲ್ಲಿ ಇರುತ್ತಾರೆ. ಪ್ರತೀ ಚೆಕ್ ಪೋಸ್ಟ್‌ನಲ್ಲಿ ಇನ್‌ಸ್ಪೆಕ್ಟರ್‌ ಸೇರಿ 11 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂದು ಮಂಗಳೂರು ಪೊಲೀಸ್‌ ಆಯುಕ್ತ ಶಶಿಕುಮಾರ್‌ ತಿಳಿಸಿದ್ದಾರೆ.

Comments are closed.