ಕರಾವಳಿ

ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಬ್ಯಾರಿ ಜಾನಪದ ಕಲೆಗಳ ಸರ್ಟಿಫಿಕೇಟ್ ಕೋರ್ಸ್ ತರಬೇತಿ ಉದ್ಘಾಟನೆ

Pinterest LinkedIn Tumblr

ಮಂಗಳೂರು, ಏಪ್ರಿಲ್ 11 : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು ಇದರ ಆಶ್ರಯದಲ್ಲಿ ‘ಬ್ಯಾರಿ ದಫ್, ಕೋಲ್ಕಲಿ, ಒಪ್ಪನೆ ಪಾಟ್ ಜಾನಪದ ಕಲೆಗಳ ಸರ್ಟಿಫಿಕೇಟ್ ಕೋರ್ಸ್ ತರಬೇತಿ’ ಉದ್ಘಾಟನಾ ಕಾರ್ಯಕ್ರಮವು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಮಾಫೇಯಿ ಸೆಂಟರ್ ಏರಿಕ್ ಮಥಾಯಸ್ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಕಾಲೇಜು ರಿಜಿಸ್ಟ್ರಾರ್ ಡಾ.ಆಲ್ವಿನ್ ಡೆಸಾ ಕಾರ್ಯಕ್ರಮ ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಅವರು, ಬ್ಯಾರಿ ಸಾಹಿತ್ಯ ಅಕಾಡೆಮಿಯು ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ನಾವು ಉತ್ತಮವಾಗಿ ಕೆಲಸವನ್ನು ಮಾಡಿದರೆ ಅದಕ್ಕಿಂತ ದೊಡ್ಡ ತೃಪ್ತಿ ಯಾವುದೂ ಇಲ್ಲ. ದಿನದಿಂದ ದಿನಕ್ಕೆ ಬ್ಯಾರಿ ಸಮುದಾಯಕ್ಕೆ ಅಲ್ಲದೇ ಎಲ್ಲಾ ಸಮುದಾಯಕ್ಕೂ ಪೂರಕವಾದ ಉತ್ತಮ ಕೆಲಸ ಮಾಡುತ್ತಿದೆ. ಹೀಗಾಗಿ ನಮಗೆ ಬ್ಯಾರಿ ಅಕಾಡೆಮಿ ಬಗ್ಗೆ ಹೆಮ್ಮೆ ಇದೆ ಅಂತಾ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ, ಅಕಾಡೆಮಿಗಳನ್ನು ಸರ್ಕಾರ ನೀಡಿರುವುದು ಭಾಷಾ ಅಭಿವೃದ್ದಿಗಾಗಿ. ಬ್ಯಾರಿ ಜಾನಪದ ಕಲೆಗಳಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಇಂತಹ ಕಲೆಗಳು ನಶಿಸಿ ಹೋಗುವ ಭೀತಿ ಇದೆ. ಹೀಗಾಗಿ ಪುರಾತನವಾದ ಕಲೆಗಳನ್ನು ಕಲಿಸಲು ನಾವು ನಿರ್ಧಾರ ಮಾಡಿ ಕೋರ್ಸ್ ಮೂಲಕ ಜಾನಪದ ಕಲೆಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ಹೊಸ ಕೋರ್ಸ್ ಉದ್ಯೋಗ ಅವಕಾಶಗಳನ್ನು ಸೃಷ್ಟಿ ಮಾಡಲಿದ್ದು ಯುವಜನತೆಗೆ ಇದೊಂದು ಹೊಸ ಅವಕಾಶ ಸಿಗಲಿದೆ ಅಂದರು.

ಮುಖ್ಯ ಅತಿಥಿಗಳಾಗಿ ಬ್ಯಾರಿ ಅಧ್ಯಯನ ಪೀಠದ ಸದಸ್ಯ ಅಹ್ಮದ್ ಬಾವಾ ಪಡೀಲ್, ಕಾರ್ನಾಡ್ ಮುಲ್ಕಿಯ ದಫ್ ಉಸ್ತಾದ್ ಕೆ.ಎಚ್. ನೂರ್ ಮಹಮ್ಮದ್, ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟ ದ.ಕ ಮತ್ತು ಉಡುಪಿ ಜಿಲ್ಲೆ ಇದರ ಉಪಾಧ್ಯಕ್ಷ ಸರ್ಫರಾಜ್ ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತುದಾರರಾದ ರಹೀಸ್ ಟಿ.ಕಣ್ಣೂರು ಭಾಗವಹಿಸಿದ್ದರು. ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಉಪಸ್ಥಿತರಿದ್ದು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ಕಾರ್ಯಕ್ರಮದ ಸಂಚಾಲಕ ಶಂಶೀರ್ ಬುಡೋಳಿ, ಸಂಯೋಜಕ ಫ್ಲೋರಾ ಕ್ಯಾಸ್ತಲಿನೊ, ವಿದ್ಯಾರ್ಥಿ ಸಂಯೋಜಕ ಚೆಲ್ಸಿಯಾ ಡಿಸೋಜಾ, ಅಕಾಡೆಮಿಯ ಮಾಜಿ ಸದಸ್ಯ ಹುಸೇನ್ ಕಾಟಿಪಳ್ಳ ಉಪಸ್ಥಿತರಿದ್ದರು.

ಎಲ್ಸನ್ ಡಿಸೋಜಾ ವಂದಿಸಿದರು. ಶರಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Comments are closed.