ಬೆಂಗಳೂರು: 1-9 ನೇ ತರಗತಿ ವಿದ್ಯಾರ್ಥಿಗಳಿಗೆ ಲಿಖಿತ ಪರೀಕ್ಷೆ ಆತವಾ ಮೌಲ್ಯಾಂಕನ ಕುರಿತು ಎರಡು ದಿನಗಳಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.
ಸೋಮವಾರದಂದು ಶಿಕ್ಷಣ ತಜ್ಞರು ಹಾಗೂ ವಿವಿಧ ಸಂಘಟನೆಗಳ ಜತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾತನಾಡಿದ ಅವರು, ವಿದ್ಯಾಭಾರತಿ ಸೇರಿ ಕೆಲವು ಶಾಲಾ ಸಂಘಟನೆಗಳು ಮೌಲ್ಯಾಂಕನ ಮಾಡಬೇಕು ಎಂದು ಹೇಳಿವೆ. ಹಾಗೆಯೇ ಶಿಕ್ಷಣ ತಜ್ಞರು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಇರುವ ಅವಕಾಶದಂತೆ ಮೌಲ್ಯಾಂಕನ ನಡೆಸಬೇಕು ಎಂದು ಹೇಳಿದ್ದಾರೆ. ಇದೆಲ್ಲವನ್ನು ಕ್ರೋಢೀಕರಿಸಿ, ಇಲಾಖೆಯ ಅಧಿಕಾರಿಗಳ ಚರ್ಚಿಸಿ ಎರಡು ದಿನದಲ್ಲಿ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದರು.
ಶಾಲೆ ಸ್ಥಗಿತಗೊಂಡಿದ್ದರೂ ಟ್ಯೂಷನ್ ಗಳು ನಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಈ ಸಂಬಂಧ ಅಗತ್ಯ ಸೂಚನೆ ನೀಡಲಿದ್ದೇವೆ ಎಂದು ಹೇಳಿದರು.