ಕರಾವಳಿ

ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ-ರೂ. 6 ಕೋಟಿ ವೆಚ್ಚದಲ್ಲಿ ಮರುನಿರ್ಮಾಣ : ಮಂಗಳೂರಿನಲ್ಲಿ ಸಚಿವ ಡಾ.ಕೆ.ಸುಧಾಕರ್

Pinterest LinkedIn Tumblr

ಮಂಗಳೂರು : ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮರುನಿರ್ಮಿಸಿ ಜಾಗತಿಕ ಮಟ್ಟದ ಆರೋಗ್ಯ ಕೇಂದ್ರವಾಗಿ ರೂಪಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪುಂಜಾಲಕಟ್ಟೆ ಪಿಎಚ್ ಸಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದು, ನಾಲ್ಕು ಎಕರೆ ವಿಸ್ತೀರ್ಣದ ಜಾಗದಲ್ಲಿದೆ. ಇಲ್ಲಿನ ಒಪಿಡಿಗೆ ಹೆಚ್ಚು ಜನರು ಬರುತ್ತಿದ್ದಾರೆ. ಆದ್ದರಿಂದ ಈ ಆಸ್ಪತ್ರೆಯನ್ನು ಉತ್ತಮಪಡಿಸಬೇಕಿದೆ. ಈಗಾಗಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅನುಮತಿ ನೀಡಿದ್ದಾರೆ. ಇದೇ ಯೋಜನೆಯಡಿ, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.

ಇದನ್ನು ಉತ್ತಮ ಆರೋಗ್ಯ ಕೇಂದ್ರವಾಗಿಸಲು 6 ಕೋಟಿ ರೂ. ನಲ್ಲಿ ಅಭಿವೃದ್ಧಿ ಮಾಡಲಾಗುವುದು. ಜೊತೆಗೆ ವೈದ್ಯರು, ನರ್ಸ್ ಗಳಿಗೆ, ಡಿ ಗ್ರೂಪ್ ನೌಕರರಿಗೆ ಇಲ್ಲಿಯೇ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿದ್ದು, ಕೆಲ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಈ ಆಸ್ಪತ್ರೆಗೆ ಡಿ ಗ್ರೂಪ್ ನೌಕರರ ನೇಮಕ ಸಂಬಂಧ ಮನವಿ ಬಂದಿದ್ದು, ಈ ಕುರಿತು ಪರಿಶೀಲಿಸಲಾಗುವುದು. ಇಲ್ಲಿನ ತಜ್ಞವೈದ್ಯರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಲು ಅವಕಾಶವಿದ್ದು, ಅದನ್ನು ನಡೆಸಲು ಸೂಚಿಸಲಾಗಿದೆ. ಕೆಲ ಉಪಕರಣಗಳನ್ನು ನೀಡಬೇಕೆಂಬ ಬೇಡಿಕೆ ಇದ್ದು, ಅದನ್ನೂ ನೀಡಲಾಗುವುದು ಎಂದರು.

ಇಲ್ಲಿನ ಸ್ಥಳೀಯ ಶಾಸಕರು ಪ್ರತಿ 15 ದಿನಗಳಿಗೊಮ್ಮೆ ಬಂದು ವೈದ್ಯರ ರೋಗಿಗಳ ಸಮಸ್ಯೆ ಆಲಿಸುತ್ತಿದ್ದಾರೆ. ಇಂತಹ ಜನಪ್ರತಿನಿಧಿಗಳಿದ್ದರೆ ಸಮಸ್ಯೆಗಳು ಬೇಗ ಪರಿಹಾರವಾಗುತ್ತದೆ ಎಂದರು.

ಇಡೀ ದಿನ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ಸಚಿವರು ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರ, ಬಂಟ್ವಾಳ ತಾಲ್ಲೂಕು ಆಸ್ಪತ್ರೆ, ವೆನ್ ಲಾಕ್ ಜಿಲ್ಲಾಸ್ಪತ್ರೆ ಹಾಗೂ ಲೇಡಿ ಗೋಷನ್ ಹೆರಿಗೆ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Comments are closed.