ದಕ್ಷಿಣ ಭಾರತದ ಪ್ರಖ್ಯಾತ ನಟ, ಸೂಪರ್ ಸ್ಟಾರ್ ರಜನಿಕಾಂತ್‌ಗೆ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಇಂದು ಘೋಷಿಸಿದ್ದಾರೆ.
”ಭಾರತೀಯ ಚಿತ್ರರಂಗದ ಇತಿಹಾಸದಲ್ಲಿನ ಶ್ರೇಷ್ಠ ನಟರ ಪೈಕಿ ಒಬ್ಬರಾಗಿರುವ ರಜನಿಕಾಂತ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸುತ್ತಿರುವುದು ನನಗೆ ಖುಷಿ ತಂದಿದೆ. ನಟ, ನಿರ್ಮಾಪಕ ಮತ್ತು ಸ್ಕ್ರೀನ್‌ರೈಟರ್ ಆಗಿ ಅವರ ಕೊಡುಗೆ ಅಪಾರ” ಎಂದು ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆಯುತ್ತಿರುವ 12ನೇ ದಕ್ಷಿಣ ಭಾರತೀಯ ರಜನಿಕಾಂತ್. ಈ ಹಿಂದೆ ದಕ್ಷಿಣ ಭಾರತದಿಂದ ನಟ ಸಾರ್ವಭೌಮ, ವರನಟ, ಕನ್ನಡಿಗ ಡಾ.ರಾಜ್‌ಕುಮಾರ್, ತೆಲುಗು ನಟ ಅಕ್ಕಿನೇನಿ ನಾಗಶೇರ್ ರಾವ್, ಕೆ.ಬಾಲಚಂದರ್ ಸೇರಿದಂತೆ 11 ಮಂದಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದರು.
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆಯೇ ಟ್ವಿಟ್ಟರ್‌ನಲ್ಲಿ ರಜನಿಕಾಂತ್ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿದೆ. ಅಭಿಮಾನಿಗಳು, ಸಿನಿಪ್ರಿಯರು, ಗಣ್ಯರು, ತಾರೆಯರು, ರಾಜಕಾರಣಿಗಳು ರಜನಿಕಾಂತ್‌ಗೆ ಶುಭಾಶಯ ತಿಳಿಸುತ್ತಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುತ್ತಿರುವ ರಜನಿಕಾಂತ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಸಿ.ಟಿ.ರವಿ ಟ್ವೀಟ್
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟ್ವಿಟ್ಟರ್ ಮೂಲಕ ರಜನಿಕಾಂತ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ”ಪ್ರತಿಷ್ಟಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆಯುವ ತಲೈವಾ ರಜನಿಕಾಂತ್‌ಗೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆಯುವ ರಜನಿಕಾಂತ್‌ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. ”ತಲೆಮಾರುಗಳಿಂದ ಜನಪ್ರಿಯರಾಗಿರುವ, ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿರುವ, ಪ್ರೀತಿ ತುಂಬಿದ ವ್ಯಕ್ತಿತ್ವ ಹೊಂದಿರುವ ತಲೈವಾ ರಜನಿಕಾಂತ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿರುವುದು ಅಪಾರ ಸಂತೋಷದ ಸಂಗತಿ. ಅವರಿಗೆ ಅಭಿನಂದನೆಗಳು” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.