ಕರಾವಳಿ

ಅಧ್ಯಕ್ಷರ ಆಯ್ಕೆಯಿಲ್ಲ, ಸಭೆಯೂ ನಡೆದಿಲ್ಲ: ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿಗೆ ಬೆಳ್ವೆ ಗಣೇಶ್ ಕಿಣಿ ರಾಜಿನಾಮೆ

Pinterest LinkedIn Tumblr

ಕುಂದಾಪುರ: ರಾಜ್ಯದ ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನವಾಗಿ ನೇಮಕಗೊಂಡಿದ್ದ ಉದ್ಯಮಿ ಗಣೇಶ್ ಕಿಣಿ ಬೆಳ್ವೆ ರಾಜಿನಾಮೆ ಸಲ್ಲಿಸಿದ್ದಾರೆ.

ರಾಜ್ಯದ ಮುಜರಾಯಿ ಸಚಿವಾಲಯದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ರಾಜಿನಾಮೆ ಪತ್ರ ರವಾನಿಸಿರುವ ಗಣೇಶ್ ಕಿಣಿ ಅವರು, ವ್ಯವಸ್ಥಾಪನಾ ಸಮಿತಿಯ ಸದಸ್ಯನಾಗಿರುವುದು ದೇವರ ಸೇವೆಗೆ ಸಿಕ್ಕ ಅವಕಾಶ ಎಂದು ತಿಳಿದುಕೊಂಡಿದ್ದೆ. ಆದರೆ ಸಮಿತಿ ಸದಸ್ಯರ ನೇಮಕಾತಿ ನಡೆದು 5 ತಿಂಗಳೂ ಕಳೆದಿದ್ದರೂ ಇದುವರೆಗೂ ವ್ಯವಸ್ಥಾಪನಾ ಸಮಿತಿಯ ಸಭೆಗಳು ನಡೆದಿಲ್ಲ. ಯಾವುದೆ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಕೆಲವೊಂದು ಜನರ ಪಟ್ಟು ಹಾಗೂ ಪ್ರತಿಷ್ಠೆ ಈ ವಿಳಂಭಕ್ಕೆ ಕಾರಣ ಎಂದು ತಿಳಿದು ಬಂದಿದ್ದು, ಇಂತಹ ವ್ಯವಸ್ಥೆಯಲ್ಲಿ ಮುಂದುವರೆಯುವುದು ನನಗೆ ಸರಿ ಕಾಣದೆ ಇರುವುದರಿಂದ ನಾನು ಸ್ವ ಇಚ್ಚೆಯಿಂದ ರಾಜಿನಾಮೆ ನೀಡುತ್ತಿರುವುದಾಗಿ ರಾಜಿನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ರಾಜಿನಾಮೆ ಹಿಂಪಡೆಯಲು ಒತ್ತಾಯ..
ಜಿಲ್ಲೆಯ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಗಣೇಶ್ ಕಿಣಿ ಹಲವಾರು ವರ್ಷಗಳಿಂದ ಬೆಳ್ವೆ, ಹೆಂಗವಳ್ಳಿ, ಹಾಲಾಡಿ ಸೇರಿದಂತೆ ಜಿಲ್ಲೆಯ ಹಲವು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ತಮನ್ನು ತೊಡಗಿಸಿಕೊಂಡಿದ್ದರು. ಪರಿಸರದ ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ಸಕ್ರೀಯರಾಗಿದ್ದ ಅವರು ಸರಳ ವ್ಯಕ್ತಿತ್ವದಿಂದಾಗಿ ದೊಡ್ಡ ಸ್ನೇಹ ಬಳಗವನ್ನು ಹೊಂದಿದ್ದಾರೆ.

ಕಿಣಿಯವರ ರಾಜಿನಾಮೆ ನಿರ್ಧಾರ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅವರ ಸ್ನೇಹಿತರು ಹಾಗೂ ಹಿತೈಷಿಗಳು ಅವರನ್ನು ಸಂಪರ್ಕಿಸಿ ರಾಜಿನಾಮೆ ಹಿಂತೆಗೆತಕ್ಕೆ ಒತ್ತಾಯವನ್ನು ಹೇರುತ್ತಿದ್ದಾರೆ.

ಅಧ್ಯಕ್ಷರ ಆಯ್ಕೆ ನಡೆದಿಲ್ಲ
ಅ.21 ರಂದು ಬೆಂಗಳೂರಿನಲ್ಲಿ ನಡೆದಿದ್ದ ರಾಜ್ಯ ಧಾರ್ಮಿಕ ಪರಿಷತ್‌ ಸಭೆಯಲ್ಲಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಕುರಿತು ತೆಗೆದುಕೊಂಡ ನಿರ್ಧಾರದಂತೆ ಅ.27 ರಂದು 9 ಮಂದಿ ಸದಸ್ಯರನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಲಾಗಿತ್ತು.

ರಾಮಚಂದ್ರ ಅಡಿಗ, ರತ್ನ ಆರ್ ಕುಂದರ್, ಸಂಧ್ಯಾ ರಮೇಶ್, ಗೋಪಾಲಕೃಷ್ಣ, ಕೆರಾಡಿ ಚಂದ್ರಶೇಖರ ಶೆಟ್ಟಿ, ಡಾ.ಅತುಲಕುಮಾರ ಶೆಟ್ಟಿ, ಗಣೇಶ್ ಕಿಣಿ, ಜಯಾನಂದ ಹೋಬಳಿದಾರ್ ಹಾಗೂ ಶೇಖರ ಪೂಜಾರಿ ಅವರನ್ನು ನೇಮಕ ಮಾಡಲಾಗಿತ್ತು. ಸಮಿತಿಗೆ ನೇಮಕವಾದ ಸದಸ್ಯರು ತಮ್ಮ ಪ್ರಥಮ ಸಭೆಯಲ್ಲಿ ತಮ್ಮಲ್ಲಿ ಒಬ್ಬರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಿ, ನಡವಳಿಯನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಆಯುಕ್ತರ ಕಚೇರಿಗೆ ಕಳುಹಿಸುವಂತೆ ಆದೇಶ ಪತ್ರದಲ್ಲಿ ಸೂಚಿಸಲಾಗಿತ್ತು.

5 ತಿಂಗಳು ಕಳೆದರೂ ಅಧ್ಯಕ್ಷರ ಆಯ್ಕೆಯಿಲ್ಲ….
ನೇಮಕಾತಿ ನಡೆದು ಬರೊಬ್ಬರಿ 5 ತಿಂಗಳು ಕಳೆದಿದ್ದರೂ ಇನ್ನೂ ನೂತನ ಸದಸ್ಯರ ಸಭೆ ನಡೆಯದೆ ಇರುವುದರಿಂದ ವ್ಯವಸ್ಥಾಪನ ಸಮಿತಿಗೆ ಹೊಸ ಅಧ್ಯಕ್ಷರ ಆಯ್ಕೆಯೂ ನಡೆದಿಲ್ಲ. ಪೂರ್ಣ ಪ್ರಮಾಣದ ಸಮಿತಿಗೆ ಆದೇಶವಾಗಿದ್ದರೂ ಅಧ್ಯಕ್ಷರ ಆಯ್ಕೆ ನಡೆಯದೆ ಇರುವುದರಿಂದ ಕುಂದಾಪುರದ ಉಪ ವಿಭಾಗಾಧಿಕಾರಿಯವರೇ ದೇವಸ್ಥಾನದ ಆಡಳಿತಾಧಿಕಾರಿಯವರಾಗಿ ಮುಂದುವರೆಯುತ್ತಿದ್ದಾರೆ.

 

Comments are closed.