ಕರ್ನಾಟಕ

‘ನನಗೆ ಟಾರ್ಚರ್ ಆಗ್ತಿದೆ, ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸ್ತಿದೆ’: ಸಿಡಿ ಲೇಡಿ

Pinterest LinkedIn Tumblr

ಬೆಂಗಳೂರು: ಸಿ.ಡಿ ಪ್ರಕರಣದ ಸಂತ್ರಸ್ತೆ ಎನ್ನಲಾದ ಯುವತಿ ಶನಿವಾರ ಬೆಳ್ಳಂಬೆಳ್ಳಗೆ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಮಾಜಿ ಸಚಿವ ರಮೇಶ್​ ಜಾರಕಿಹೊಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನ್ನ ತಂದೆ-ತಾಯಿಯನ್ನು ಬೆಂಗಳೂರಿಗೆ ಕರೆತಂದು ಸೂಕ್ತ ರಕ್ಷಣೆಗೆ ನೀಡುವಂತೆ ಎಸ್ಐಟಿಗೆ ಮನವಿ ಮಾಡಿಕೊಂಡಿದ್ದಾಳೆ.

ಬಿಡುಗಡೆಯಾಗಿರುವ ವಿಡಿಯೋದಲ್ಲಿ ಮಾತನಾಡಿರುವ ಆಕೆ ‘ರಮೇಶ್ ಜಾರಕಿಹೊಳಿ ಹೆಸರು ಬರೆದು ಸಾಯಬೇಕೆನಿಸ್ತಿದೆ’. ನನಗೆ ಅಷ್ಟೊಂದು ಟಾರ್ಚರ್​ ಆಗುತ್ತಿದೆ.. ನನಗೆ ನ್ಯಾಯ ಕೊಡಿಸಿ ಎಂದು ಯುವತಿ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾಳೆ.

ರಮೇಶ್ ಜಾರಕಿಹೊಳಿ ಒಂದೇ ದಿನದಲ್ಲಿ ಸರ್ಕಾರ ಬೀಳಿಸಬಹುದು ಎಂದು ಹೇಳುತ್ತಾರೆ. ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ಲ ಎಲ್ಲರನ್ನೂ ಜೈಲಿಗೆ ಹಾಕಿಸುವುದಾಗಿಯೂ ರಮೇಶ್ ಹೇಳ್ತಾರೆ. ಅವರು ಈ ರೀತಿಯಾಗಿ ಹೇಳುತ್ತಾರೆಂದರೆ ಏನು ಅರ್ಥ? ಜನರೇ ಈ ಮಾತನ್ನು ಅರ್ಥ ಮಾಡಿಕೊಳ್ಳಬೇಕು. ಎಷ್ಟು ಹಣ ಬೇಕಾದರೂ ಖರ್ಚು ಮಾಡುತ್ತೇನೆಂದು ಹೇಳ್ತಾರೆ. ನಮ್ಮ ತಂದೆ, ತಾಯಿ ತಲೆ ಬೇಕಿದ್ದರೂ ತೆಗೆಯಬಹುದು. ನಾಳೆ ದಿನ ನನ್ನನ್ನೇ ಸಾಯಿಸಬಹುದು. ಏನಾಗುತ್ತೆಂದು ಯಾರಿಗೂ ಗೊತ್ತಿಲ್ಲ. ನಾನು ಹೇಳಿಕೆ ನೀಡಬೇಕಾದರೆ ಪೋಷಕರು ಇರಬೇಕು. ನನ್ನ ಕಣ್ಣು ಮುಂದೆ ತಂದೆ, ತಾಯಿ, ಅಜ್ಜಿ ಸಹೋದರಿರಬೇಕು.‘ನನ್ನ ಪೋಷಕರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ.ನನಗೆ ನ್ಯಾಯ ಕೊಡಿಸಿ, ನನಗೆ ಬದುಕಬೇಕೋ, ಸಾಯಬೇಕೋ ಒಂದು ಗೊತ್ತಾಗುತ್ತಿಲ್ಲ. ಯಾವುದೇ ಮಾಹಿತಿ ಸಿಕ್ಕರೂ ಅದರಲ್ಲಿ ಯಾವುದು ಸತ್ಯ? ಯಾವುದು ಸುಳ್ಳು? ಎಂಬುದನ್ನು ಪರಿಶೀಲಿಸಿ, ಪ್ರಸಾರ ಮಾಡಬೇಕು. ಸಿಡಿ ಬಿಡುಗಡೆ ಆದ ದಿನ ನನಗೆ ಏನು ಮಾಡಬೇಕು? ಎಲ್ಲಿಗೆ ಹೋಗಬೇಕು? ಯಾರು ಇದನ್ನು ಮಾಡಿದ್ದು ಎಂಬ ಐಡಿಯಾ ಸಹ ಇರಲಿಲ್ಲ. ತುಂಬಾ ಭಯದಲ್ಲಿದ್ದೆ.

ಈ ಸಂದರ್ಭದಲ್ಲಿ ಮಾಧ್ಯಮದಲ್ಲಿ ನನಗೆ ಪರಿಚಯವಾಗಿದ್ದ ನರೇಶ್​ ಎಂಬುವರಿಗೆ ಕರೆ ಮಾಡಿ, ನನ್ನ ಸಮಸ್ಯೆ ಹೇಳಿಕೊಂಡೆ. ನೀವು ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದ ಬಳಿಕ ಏನೆಲ್ಲಾ ಆಗಿದೆ ನೋಡಿ ಕೇಳಿಕೊಂಡೆ. ಈ ವಿಚಾರದಲ್ಲಿ ನಾನು ಚಿಕ್ಕವನು. ಇದಕ್ಕೆಲ್ಲ ರಾಜಕೀಯ ಬೆಂಬಲ ಬೇಕಾಗುತ್ತದೆ. ನಾವು ಹೋಗಿ ದೊಡ್ಡ ದೊಡ್ಡ ನಾಯಕರ ಬಳಿ ಮಾತನಾಡೋಣ, ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್​ ಬಳಿ ಮಾತನಾಡೋಣ, ನಿನಗೆ ನ್ಯಾಯ ಸಿಗುತ್ತದೆ ಯೋಚನೆ ಮಾಡಬೇಡ ಎಂದು ನರೇಶ್​ ಅವರು ಧೈರ್ಯ ಹೇಳಿದರು. ಬಳಿಕ ನಾನಿರುವ ಸ್ಥಳಕ್ಕೆ ಬಂದು ಡಿಕೆಶಿ ಮನೆ ಕರೆದೊಯ್ದರು. ಅಷ್ಟರಲ್ಲಿ ನಮ್ಮ ಮನೆಯಿಂದ ನನಗೆ ಸಾಕಷ್ಟು ಕರೆಗಳು ಬರುತ್ತಿದ್ದವು.

ನಮ್ಮ ಮನೆಯಲ್ಲಿ ಎಲ್ಲರೂ ಹೆದರಿಕೊಂಡಿದ್ದರು. ನಾನು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ. ಡಿಕೆಶಿ ಮನೆಗೆ ಹೋದಾಗ ಅಂದು ಡಿಕೆಶಿ ಅವರು ಸಿಗಲಿಲ್ಲ. ಅಂದು ನನ್ನ ಅಪ್ಪ-ಅಮ್ಮ ತುಂಬ ಹೆದರಿದ್ದರು. ಈಗ ಆಡಿಯೋ ಕ್ಲಿಪ್​ ಹೊರಬಂದಿರುವುದು ನೋಡಿದರೆ ನಮ್ಮ ತಂದೆ-ತಾಯಿಗೆ ಸುರಕ್ಷತೆ ಇಲ್ಲ ಎಂಬುದು ತಿಳಿಯುತ್ತಿದೆ. ನಾನು ಸೇಫ್​ ಆಗಿ ಇದ್ದೀನಿ. ನನ್ನನ್ನು ಯಾರು ಅಪಹರಿಸಿಲ್ಲ ಎಂದು ಹೇಳಿದ್ದಾರೆ.

ಎಸ್​ಐಟಿ ಅವರಲ್ಲಿ ಕೇಳಿಕೊಳ್ಳುವುದೇನೆಂದರೆ, ನಾವು ರಕ್ಷಣೆ ಕೊಡ್ತೀವಿ ಎಂದು ಹೇಳ್ತಿದ್ದೀರಾ.. ಹೌದು ನೀವು ರಕ್ಷಣೆ ಕೊಡುತ್ತಿದ್ದೀರಾ ಆದರೆ, ನಮ್ಮ ತಂದೆ-ತಾಯಿ ಮತ್ತು ಇಬ್ಬರು ತಮ್ಮಂದಿರನ್ನು ಬೆಂಗಳೂರಿಗೆ ಕರೆ ತನ್ನಿ. 24 ದಿನದಿಂದ ನನಗೆ ತುಂಬಾ ಕಿರುಕುಳ ಆಗುತ್ತಿದೆ. ನಾನು ಏನೋ ಒಂದು ಹೇಳಿದರೆ, ಇನ್ನೇನೋ ಆಗುತ್ತೆ. ನನ್ನ ಮಾನ-ಮರ್ಯಾದೆ ಹೋಗಿದೆ. ನಾನೊರ್ವ ಸಂತ್ರಸ್ತೆ ಆಗಿರುವುದರಿಂದ ನನಗೆ ನೀವು ನ್ಯಾಯ ಕೊಡಿಸುತ್ತೀರಾ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದ್ದಾರೆ. ನನ್ನ ಕುಟುಂಬದವರು ಸುರಕ್ಷಿತವಾಗಿ ನನ್ನೆದುರು ಬಂದರೆ ಮಾತ್ರ ಹೇಳಿಕೆ ಕೊಡಲು ಸಿದ್ಧ ಎಂದಿದ್ದಾರೆ.

Comments are closed.