
ಮಂಗಳೂರು, ಮಾರ್ಚ್.21: ರಾಜ್ಯದ ಎಲ್ಲಾ ಪ್ರೇಕ್ಷಣೀಯ ಸ್ಥಲಗಳಿಗೆ ಕಾಯಕಲ್ಪ ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು ಎಂದು ಸಚಿವ ಸಿ.ಪಿ. ಯೋಗೀಶ್ವರ್ ತಿಳಿಸಿದ್ದಾರೆ.
ಅವರು ಶನಿವಾರ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಸಹಭಾಗಿತ್ವದಲ್ಲಿ ಆರಂಭಿಸಲಾಗಿರುವ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ ನೀಡಿ ಮಾತನಾಡಿದರು.

ಕೆರೆಕಟ್ಟೆ ತುಂಬಿಸುವ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಿದ್ದ ತಾನು ಸಣ್ಣ ನೀರಾವರಿ ಇಲಾಖೆಯ ಸಚಿವನಾಗುವ ನಿರೀಕ್ಷೆಯಲ್ಲಿದ್ದೆ. ಆದರೆ ಆಕಸ್ಮಿಕವಾಗಿ ಪ್ರವಾಸೋದ್ಯಮ ಇಲಾಖೆ ದೊರೆಕಿದ್ದು, ಅಭಿವೃದ್ಧಿಯ ದೃಷ್ಟಿಯಿಂದ ಬಹಳಷ್ಟು ಆಲೋಚನೆ ಮಾಡಿದ್ದು, ಈಗಾಗಲೇ ಮೈಸೂರು ಹಾಗೂ ಮಂಗಳೂರಿಗೆ ತಲಾ ಎರಡು ಬಾರಿ ಭೇಟಿ ನೀಡಿರುವುದಾಗಿ ತಿಳಿಸಿದರು.

ಈ ಸಂದರ್ಭ ಸಚಿವ ಯೋಗೀಶ್ವರ್ ಹಾಗೂ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ರವರು ವೈಯಕ್ತಿಕ ನೆಲೆಯಲ್ಲಿ ತಲಾ 5 ಲಕ್ಷ ರೂ.ಗಳ ದೇಣಿಗೆಯನ್ನು ಘೋಷಿಸಿದರು.ಕಾರ್ಯಕ್ರಮದಲ್ಲಿ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಮೇಯರ್ ಪ್ರೇಮಾನಂದ ಶೆಟ್ಟಿ , ಪತ್ರಕರ್ತರ ಬೇಡಿಕೆಗಳಿಗೆ ಸರಕಾರದ ಸೂಚನೆ ನಿಯಮಗಳ ಮೇರೆಗೆ ಪಾಲಿಕೆ ವತಿಯಿಂದ ಸಹಕಾರ ನೀಡಲಾಗುವುದು ಎಂದರು.
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕರಾದ ಕುಮಾರ್ ಪುಷ್ಕರ್ ಹಾಗೂಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು , ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ್ ಶೆಟ್ಟಿ , ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ಉಪಸ್ಥಿರಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಬಿ.ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ದ.ಕ. ಉಡುಪಿ 20 ಕಂಬಳಗಳಿಗೆ 1 ಕೋಟಿ ರೂ. ಸಹಾಯಧನ ಹಸ್ತಾಂತರ:
ಈ ಸಂದರ್ಭ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ದ.ಕ. ಹಾಗೂ ಉಡುಪಿಯಲ್ಲಿ (ತಲಾ 10 ಕಂಬಳಗಳಿಗೆ ) ಕಂಬಳಕ್ಕಾಗಿ ತಲಾ 50 ಲಕ್ಷ ರೂ.ನಂತೆ ಸಹಾಯಧನದ ಚೆಕ್ ಅನ್ನು ಸಚಿವ ಸಿ.ಪಿ. ಯೋಗೀಶ್ವರ್ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.
Comments are closed.