ಕರಾವಳಿ

ಆಸ್ಟರ್ ಮಿಮ್ಸ್ ಕೋಝಿಕ್ಕೋಡ್‌ ಆಸ್ಪತ್ರೆಯಲ್ಲಿ ಬಡ ಕುಟುಂಬದ ಮಕ್ಕಳಿಗೆ ಉಚಿತ ಪಿಡಿಯಾಟ್ರಿಕ್ ಶಸ್ತ್ರ ಚಿಕಿತ್ಸೆ

Pinterest LinkedIn Tumblr

ಮಂಗಳೂರು, ಮಾರ್ಚ್.21: ಉತ್ತರ ಕೇರಳದ ಪ್ರಸಿದ್ಧ ಆಸ್ಪತ್ರೆಯಾದ ಆಸ್ಟರ್ ಮಿಮ್ಸ್ ಕೋಝಿಕ್ಕೋಡ್‌ನಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬದ ಮಕ್ಕಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಆಸ್ಪತ್ರೆಯ ಸಿಇಒ ಫರ್ಹಾನ್ ಯಾಸಿನ್ ತಿಳಿಸಿದರು.

ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಬಿಪಿಎಲ್ ಕುಟುಂಬದ ಮಕ್ಕಳಿಗೆ ಸುಮಾರು 20 ಲಕ್ಷ ರೂ. ವೆಚ್ಚದ ಲಿವರ್ ಟ್ರಾನ್ಸ್‌ಪ್ಲಾಂಟ್, 25 ಲಕ್ಷ ರೂ. ವೆಚ್ಚದ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್, 8 ಲಕ್ಷ ರೂ. ವೆಚ್ಚದ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಶಸ್ತ್ರ ಚಿಕಿತ್ಸೆಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಗಳನ್ನು ಉಚಿತವಾಗಿ ಒದಗಿಸಲಾಗುವುದು ಎಂದರು.

ಕೇರಳದಲ್ಲಿ ಆಸ್ಟರ್ ಮಿಮ್ಸ್‌ನ 20ನೆ ವಾರ್ಷಿಕೋತ್ಸವದ ಅಂಗವಾಗಿ ಮಿಮ್ಸ್ ಅಧ್ಯಕ್ಷ ಪದ್ಮಶ್ರೀ ಅಸಾದ್ ಮೂಪ್ಪೆನ್ ಅವರ ಸಲಹೆಗೆ ಅನುಗುಣವಾಗಿ ಈ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಹಣವನ್ನು ಆಸ್ಟರ್ ಡಿಎಂ ಫೌಂಡೇಶನ್, ಮಿಮ್ಸ್ ಚಾರಿಟೆಬಲ್ ಟ್ರಸ್ಟ್ ಹಾಗೂ ಇತರ ಸ್ವಯಂ ಸೇವಾ ಸಂಸ್ಥಗಳು ಜಂಟಿಯಾಗಿ ಸಂಗ್ರಹಿಸಿವೆ ಎಂದವರು ಹೇಳಿದರು.

ಕೋವಿಡ್ ಅವಧಿಯಲ್ಲಿ ಆಸ್ಪತ್ರೆಯು 50ಕ್ಕೂ ಅಧಿಕ ಲಿವರ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ.

ಇದುವರೆಗೆ 150ಕ್ಕೂ ಅಧಿಕ ಲಿವರ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರ ಚಿಕಿತ್ಸೆಯನ್ನು ಪೂರೈಸಿದ ಉತ್ತರ ಕೇರಳದ ಏಕೈಕ ಆಸ್ಪತ್ರೆ ಆಸ್ಟರ್ ಮಿಮ್ಸ್. ಕೋವಿಡ್ ಸಂದರ್ಭದಲ್ಲಿ ನಡೆಸಿದ ಲಿವರ್ ಟ್ರಾನ್ಸ್‌ಪ್ಲಯಾಂಟ್ ಶಸ್ತ್ರ ಚಿಕಿತ್ಸೆಗಳಲ್ಲಿ ಆರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಉಚಿತವಾಗಿ ನಡೆಸಲಾದ ಶಸ್ತ್ರ ಚಿಕಿತ್ಸೆಯಾಗಿದೆ.

ಇದಕ್ಕಾಗಿ ಸುಮಾರು 1.25 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಇದುವರೆಗೆ 1000ಕ್ಕೂ ಅಧಿಕ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಶಸ್ತ್ರ ಚಿಕಿತ್ಸೆಯನ್ನೂ ಆಸ್ಪತ್ರೆಯಿಂದ ನಡೆಸಲಾಗಿದೆ. ಭಾರತದ ಅತ್ಯುತ್ತಮ ಫಾರ್ಶ್ವವಾಯು ಕೇಂದ್ರಗಳಲ್ಲಿ ಮಿಮ್ಸ್ ಹೊಂದಿದ್ದು ಇದು ವಿಶ್ವ ಪಾರ್ಶ್ವವಾಯು ಸಂಸ್ಥೆಯ ಮಾನ್ಯತೆ ಹೊಂದಿದೆ ಎಂದು ಫರ್ಹಾನ್ ಯಾಸಿನ್ ತಿಳಿಸಿದರು.

ಆಸ್ಪತ್ರೆಯಲ್ಲಿ ನರ ಶಸ್ತ್ರ ಚಿಕಿತ್ಸೆ, ನರ ವಿಜ್ಞಾನ, ಎಪಿಲೆಪ್ಸಿ ಶಸ್ತ್ರ ಚಿಕಿತ್ಸೆ, ಡಿಬಿಎಸ್, ಹೃದಯ ಕಾಯಿಲೆಗಳ ಚಿಕಿತ್ಸೆ, ಹೃದಯ ಶಸ್ತ್ರ ಚಿಕಿತ್ಸೆ ಗಳನ್ನೂ ನಡೆಸಲಾಗುತ್ತದೆ ಎಂದು ಆಸ್ಪತ್ರೆಯ ಡಾ. ಪ್ರವೀದಾ ಎಸ್ ಅಂಚನ್ ತಿಳಿಸಿದರು.

ಬಿಪಿಎಲ್ ಕಾರ್ಡ್ ಹೊಂದಿಲ್ಲದೆ, ಆರ್ಥಿಕವಾಗಿ ಬಡ ಕುಟುಂಬವಾಗಿದ್ದಲ್ಲಿ ಉಚಿತ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿ ಅರ್ಜಿ ಬಂದಾಗ ಆಸ್ಪತ್ರೆಯ ತಂಡ ಕುಟುಂಬದ ಪರಿಶೀಲನೆ ನಡೆಸಿ ಚಿಕಿತ್ಸೆಗೆ ಸಹಕರಿಸುತ್ತದೆ.

ಅಗತ್ಯವಿದ್ದಲ್ಲಿ ತಮ್ಮನ್ನು ಮೊಬೈಲ್ ಮೂಲಕ ಸಂಪರ್ಕಿಸಬಹುದು ಎಂದು ಫರ್ಹಾನ್ ಯಾಸಿನ್ ತಿಳಿಸಿದರು.( ಫರ್ಹಾನ್ ಯಾಸಿನ್- ಮೊ. 7025767676 , ಡಾ. ಪ್ರವೀದಾ- 9495343017

Comments are closed.