ಕರಾವಳಿ

ಅಪಘಾತ ಹೆಚ್ಚಳ- ಸಾರ್ವಜನಿಕರು ಸಂಚಾರಿ ಸುರಕ್ಷಿತ ನಿಯಮಗಳನ್ನು ತಪ್ಪದೆ ಪಾಲಿಸುವಂತೆ ಎಸ್ಪಿ ಸೂಚನೆ

Pinterest LinkedIn Tumblr

ಮಂಗಳೂರು, ಮಾರ್ಚ್ 17 : ಸಾರ್ವಜನಿಕರ ಸುಗಮ ಹಾಗೂ ಸುರಕ್ಷತಾ ಸಂಚಾರಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ನಿರ್ಭೀತರಾಗಿ ಸಂಚರಿಸಲು ಅನುವು ಮಾಡಬೇಕು ಎಂದು ಪೊಲೀಸ್ ಅಧೀಕ್ಷಕರಾದ ಲಕ್ಷ್ಮೀ ಪ್ರಸಾದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಇಂದು ನಗರದ ತಮ್ಮ ಕಛೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸಂಚಾರಿ ದಟ್ಟಣೆ ಹೆಚ್ಚಾಗಿರುವುದರ ಜೊತೆಗೆ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದೇ ಇರುವುದರಿಂದ ಅಪಘಾತ ಪ್ರಮಾಣ ದಿನೆ ದಿನೇ ಹೆಚ್ಚುತ್ತಿದೆ. ಹೀಗಾಗಿ ಇವುಗಳಿಗೆ ಕಡಿವಾಣ ಹಾಕಲು ಸಾರ್ವಜನಿಕರು ಸಂಚಾರಿ ಸುರಕ್ಷಿತ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು ಎಂದರು

ಸಾರ್ವಜನಿಕ ರಸ್ತೆಗಳು ವಾಹನಗಳ ಸಂಚಾರಕ್ಕೆ ಸುಗಮ ವಾಗುವಂತೆ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು

ಜಿಲ್ಲೆಯಲ್ಲಿ ಕಳೆದ 3-4 ವರ್ಷಗಳಲ್ಲಿ ಹೆಚ್ಚು ಅಪಘಾತವಾಗಿರುವ ಸ್ಥಳಗಳನ್ನು ಗುರುತಿಸಿ ಅಪಘಾತ ರಹಿತ ಸ್ಥಳಗಳನ್ನಾಗಿಸಲು ಸೂಕ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸುವುದರ ಜೊತೆಗೆ ಅಪಘಾತ ವಲಯ ಪ್ರದೇಶವೆಂದು ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂದರು.

ಸೂಕ್ಷ್ಮ ಪ್ರದೇಶಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾಗಳನ್ನು ಅಳವಡಿಸಿ ವಾಹನದ ವೇಗದ ಮಿತಿಯನ್ನು ಕಂಡು ಹಿಡಿಯುವುದರೊಂದಿಗೆ ಸಂಚಾರ ನಿಯಮವನ್ನು ಉಲ್ಲಂಘಿಸಿದರೆ ದಂಡವಿಧಿಸಲು ಮುಂದಾಗಬೇಕು ಎಂದರು.

ನಗರ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗದ ಸ್ಥಳಗಳಲ್ಲಿ ಆಟೋರಿಕ್ಷಾಗಳ ತಂಗುದಾಣ, ಬಸ್ ಬೇಗಳನ್ನು ನಿರ್ಮಿಸಲು ಗುರುತಿಸಲಾಗಿರುವ ಜಾಗದಲ್ಲಿ ಸ್ಮಾರ್ಟ್‍ಸಿಟಿ ಅಡಿಯಲ್ಲಿ ಅವುಗಳನ್ನು ನಿರ್ಮಾಣ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ರಸ್ತೆ ಅಗಲೀಕರಣ ಮತ್ತು ಕಾಂಕ್ರಿಟೀಕರಣ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ ರಸ್ತೆ ಅಪಘಾತಗಳು ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ. ಆದ್ದರಿಂದ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಸಾಮಾನ್ಯ ರಸ್ತೆಗಳಲ್ಲಿ ರಸ್ತೆ ವಿಭಾಜಕಗಳನ್ನು ನಿರ್ಮಿಸಬೇಕು ಮತ್ತು ಪಾದಚಾರಿಗಳು ರಸ್ತೆದಾಟಲು ಬಳಸುವಂತಹಾ ಝೀಬ್ರಾ ಕ್ರಾಸಿಂಗ್‍ಗಳಿಗೆ ಬಣ್ಣ ಬಳಿಯುವುದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು ಎಂದ ಅವರು ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದರು.

ನವ ಮಂಗಳೂರು ಬಂದರಿನಿಂದ ಪ್ರತೀ ದಿನ ಅಧಿಕ ಭಾರದ ವಾಹನಗಳು ಸಂಚರಿಸುತ್ತಿದ್ದು, ಈ ಭಾಗದಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ಅಡ್ಡಿಯಾಗುವುದಲ್ಲದೇ ವಾಹನ ದಟ್ಟಣೆಯಾಗುತ್ತದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಅವುಗಳ ಸಂಚಾರದ ಸಮಯವನ್ನು ನಿಗಧಿಪಡಿಸಬೇಕು ಹಾಗೂ ಭಾರಿ ವಾಹನಗಳ ತಪಾಸಣೆ ನಡೆಸಬೇಕು ಎಂದು ತಿಳಿಸಿದರು.

ಮಂಗಳೂರಿನ ಮಣ್ಣಗುಡ್ಡ ಮತ್ತು ನಂತೂರಿನಲ್ಲಿ ವಾರಸುದಾರರಿಲ್ಲದ ವಾಹನಗಳು ರಸ್ತೆಯ ಬದಿಯಲ್ಲಿ ನಿಂತಿರುವುದು ಕಂಡು ಬರುತ್ತಿದ್ದು, ಆ ವಾಹನಗಳನ್ನು ಅದಷ್ಟು ಬೇಗ ತೆರವುಗೊಳಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಒಳಗೆ ಹಾಗೂ ಗ್ರಾಮೀಣ ಭಾಗಕ್ಕೆ ಸಂಚರಿಸುವ ಖಾಸಗಿ ಹಾಗೂ ಕೆಸ್‍ಆರ್‍ಟಿಸಿ ಬಸ್‍ಗಳಲ್ಲಿ ಅಪಘಾತ ಸಂಭವಿಸುತ್ತಿರುವುದು ಕಂಡುಬರುತ್ತಿದೆ, ಬಸ್‍ಗಳಲ್ಲಿ ಸರಿಯಾದ ವೇಗದ ಮಿತಿಯನ್ನು ಅಳವಡಿಸದೇ ಇರುವುದರಿಂದ ಬಸ್‍ಗಳು ಅತಿ ವೇಗವಾಗಿ ಸಂಚರಿಸಿ ಅಪಘಾತಗಳು ನಡೆಯುತ್ತಿವೆ ಇಂತಹ ಬಸ್‍ಗಳ ಸಂಚಾರವನ್ನು ನಿಲ್ಲಿಸುವಂತೆ ಅಧಿಕಾರಿಗಳು ಕಾರ್ಯಪ್ರವೃತರಾಗಬೇಕು ಎಂದರು.

ಸಭೆಯಲ್ಲಿ ಸಾರಿಗೆ ಇಲಾಖೆಯ ಪ್ರಾದೇಶಿಕ ಅಧಿಕಾರಿ ವರ್ಣೇಕರ್, ಪುತ್ತೂರು ವಿಭಾಗೀಯ ಕೆ.ಎಸ್.ಆರ್.ಟಿ.ಸಿ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಮಂಗಳೂರು ವಿಭಾಗೀಯ ಕೆ.ಎಸ್.ಆರ್.ಟಿ.ಸಿ ನಿಯಂತ್ರಣಾಧಿಕಾರಿ ಕಮಲ್‍ಕುಮಾರ್ ಹೆಚ್.ಆರ್ ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.