ಕರಾವಳಿ

ಬಡ ವಿದ್ಯಾರ್ಥಿಗಳ ಅರ್ಥಿಕ ನೆರವಿಗೆ ಶ್ರಮಿಸುತ್ತಿರುವ ಕಿನ್ನಜೆ ನಾರಾಯಣ ನಾಯಕ್‌ಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ

Pinterest LinkedIn Tumblr

ಮಂಗಳೂರು, ಮಾರ್ಚ್.10: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವಿವಿಧ ವಿದ್ಯಾರ್ಥಿ ವೇತನಗಳ ಮಾಹಿತಿ ಕೊಡುವ ಮೂಲಕ ಬಡ ಮಕ್ಕಳು ಕೂಡಾ ಆರ್ಥಿಕ ನೆರವು ಪಡೆದು ಉತ್ತಮ ಶಿಕ್ಷಣ ಪಡೆಯಲು ನೆರವು ನೀಡುತ್ತಿರುವ ನಿವೃತ್ತ ಶಿಕ್ಷಕ ಕಿನ್ನಜೆ ನಾರಾಯಣ ನಾಯಕ್ 2020ನೇ ಸಾಲಿನ ಪ್ರತಿಷ್ಠಿತ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಿರಿಯ ಪತ್ರಕರ್ತ ಎಂ.ರಘುರಾಮ್, ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಗಣೇಶ್ ಕುದ್ರೋಳಿ ಮತ್ತು ಸಾಮಾಜಿಕ ಕಾರ್ಯಕರ್ತ ಯತೀಶ್ ಬೈಕಂಪಾಡಿ ನೇತೃತ್ವದ ಆಯ್ಕೆ ಸಮಿತಿಯು ಈ ಆಯ್ಕೆ ಮಾಡಿದೆ.

ಮಾರ್ಚ್ 21ರಂದು ಅಬ್ಬಕ್ಕ ರಾಣಿ ಕ್ರೂಸ್‌ನಲ್ಲಿ ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆ ಸಮಾರಂಭದಲ್ಲಿ ಕಿನ್ನಜೆ ನಾರಾಯಣ ನಾಯಕ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಿನ್ನಜೆ ಅವರ ಪರಿಚಯ:

ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಕಿನ್ನಜೆಯ ರಾಮಪ್ಪ ನಾಯಕ್- ಜಲಜಾಕ್ಷಿ ದಂಪತಿಗಳ ಪುತ್ರ ಕಿನ್ನಜೆ ನಾರಾಯಣ ನಾಯಕ್. 1963ರಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದವರು. ಮುಂದೆ ಖಾಸಗಿಯಾಗಿ ಹೆಚ್ಚು ಶಿಕ್ಷಣ ಪಡೆದು ಹೈಸ್ಕೂಲ್ ಮುಖ್ಯೋಪಾಧ್ಯಾಯರಾಗಿ ಸೇವಾ ನಿವೃತ್ತರಾಗಿದ್ದರು.

2001ರ ಜೂನ್ 30ರಂದು ವಾಮದಪದವು ಹೈಸ್ಕೂಲ್‌ನಲ್ಲಿ ನಿವೃತ್ತರಾದ ನಾರಾಯಣ ಮಾಸ್ಟ್ರು ಆ ಸಾಲಿನ ಶೈಕ್ಷಣಿಕ ವರ್ಷ ಮುಗಿಯುವ ತನಕ ಅಲ್ಲಿಯೇ ಸೇವೆಯಲ್ಲಿ ಮುಂದುವರಿದರು. ಮತ್ತೆ ಎರಡು ವರ್ಷ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ನಾರಾಯಣ ಮಾಸ್ಟ್ರು ವಾಮದಪದವು ಹೈಸ್ಕೂಲಿಗೆ ಸೇರುವ ಹೊತ್ತಿನಲ್ಲಿ ಅಲ್ಲಿಯ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ವಿದ್ಯಾರ್ಥಿ ವೇತನ ಬರುತ್ತಿತ್ತು. ನಾಯಕರು ಅಲ್ಲಿಗೆ ಬೆನ್ನು ಹಾಕುವ ಸಂದರ್ಭದಲ್ಲಿ ಆ ಮೊತ್ತ 10 ಲಕ್ಷ ರೂ.ಗೆ ಏರಿಕೆಯಾಗಿತ್ತು.

ತಾವು ಕರ್ತವ್ಯ ನಿರ್ವಹಿಸಿದ ಶಿಕ್ಷಣ ಸಂಸ್ಥೆಗಳ ಹೆಚ್ಚಿನ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್ ಪಡೆಯಲು ಮಾರ್ಗದರ್ಶನ ನೀಡುವುದು ಅವರ ಪ್ರವೃತ್ತಿಯಾಗಿತ್ತು. ಯಾವುದೇ ವಿದ್ಯಾರ್ಥಿಯು ಆರ್ಥಿಕ ಅಡಚಣೆಯಿಂದ ಅರ್ಧದಲ್ಲಿ ಶಿಕ್ಷಣ ಮೊಟಕುಗೊಳಿಸಬಾರದು ಎಂಬುದು ಪರಮ ಉದ್ದೇಶವಾಗಿತ್ತು.

2007ರಿಂದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳ ಮಾಹಿತಿ ನೀಡಲು ತಮ್ಮ ಜೀವನವನ್ನು ಮುಡುಪಾಗಿ ಇಟ್ಟಿದ್ದರು.. ದೂರದ ಬೈಂದೂರಿನಿಂದ ಸುಳ್ಯ ತನಕವೂ ಅವರು ಹೋಗುತ್ತಿದ್ದಾರೆ.

ಶಿಕ್ಷಣ ಸಂಸ್ಥೆಗಳು ತೆರೆದುಕೊಳ್ಳುತ್ತಿದ್ದಂತೆ ನಾರಾಯಣ ನಾಯಕರು ಕಾಲೇಜುಗಳ ಕಚೇರಿಯ ಬಾಗಿಲು ತಟ್ಟುತ್ತಾರೆ. ಅಲ್ಲಿನ ಪ್ರಾಂಶುಪಾಲರ ಒಪ್ಪಿಗೆ ಪಡೆದು ತರಗತಿಗಳಿಗೆ ತೆರಳಿ ವಿದ್ಯಾರ್ಥಿ ವೇತನ ಬಗ್ಗೆ ಮಾಹಿತಿ ನೀಡುತ್ತಾರೆ. ಹೆಚ್ಚುವರಿ ಮಾಹಿತಿ ಬಯಸುವ ವಿದ್ಯಾರ್ಥಿಗಳಿಗೆ ಫೋನ್ ನಂಬರ್ ಕೊಟ್ಟು ರಾತ್ರಿ ಎಂಟು ಗಂಟೆಯಿಂದ 10 ಗಂಟೆ ಮಧ್ಯೆ ಕರೆ ಮಾಡುವಂತೆ ತಿಳಿಸಿ, ಸೂಕ್ತ ಸಲಹೆ ನೀಡುತ್ತಾರೆ.

ವಿದ್ಯಾರ್ಥಿಗಳಿಗೆ ಬಲ ತುಂಬುವ ಕೆಲಸದಲ್ಲಿ ತೊಡಗಿರುವ ಮಾಸ್ಟ್ರ್‌ಗೆ ಇದೀಗ 78 ವರ್ಷ ಪ್ರಾಯ. ಎರಡೂ ಜಿಲ್ಲೆಗಳ ಕನಿಷ್ಠ ಒಂದೂವರೆ ಲಕ್ಷದಷ್ಟು ವಿದ್ಯಾರ್ಥಿಗಳು ಸ್ಕಾಲರ್‌ಶಿಪ್ ಪಡೆಯಲು ನಾರಾಯಣ ನಾಯಕ್ ಮಾರ್ಗದರ್ಶನ ಮಾಡಿದ್ದಾರೆ.

ಅಂಗನವಾಡಿ ಕೇಂದ್ರ, ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು, ಆಯ್ದ ಖಾಸಗಿ ಪ್ರಥಮ ದರ್ಜೆ ಕಾಲೇಜುಗಳು, ಶಿಕ್ಷಕ ಶಿಕ್ಷಣ ಕಾಲೇಜುಗಳಿಗೆ ತೆರಳಿ ಮಾಹಿತಿ ನೀಡುವ ಈ ಶಿಕ್ಷಣ ಪ್ರೇಮಿ, ಓಡಾಟಕ್ಕೆ ತನ್ನ ಪಿಂಚಣಿ ಹಣವನ್ನೇ ಬಳಸುತ್ತಿದ್ದಾರೆ. ಬಡ ಕುಟುಂಬಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಬೆಂಬಲಿಸಿಸಿದ್ದಾರೆ, ಬೆಂಬಲಿಸುತ್ತಾರೆ.

2018ರಲ್ಲಿ ಸುವರ್ಣ ಟಿವಿಯ ಅಸಮಾನ್ಯ ಕನ್ನಡಿಗ ಪ್ರಶಸ್ತಿ ಸಿಕ್ಕಿದೆ. ಅದರಲ್ಲಿ ಬಂದ 25 ಸಾವಿರ ರೂ. ನಗದಿಗೆ ಅಷ್ಟೇ ಮೊತ್ತವನ್ನು ಸೇರಿಸಿ ಎರಡು ಶಾಲೆಗಳಿಗೆ ದತ್ತಿ ಕೊಟ್ಟಿದ್ದಾರೆ. ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ನೀಡಿದ್ದ ಅತ್ಯುತ್ತಮ ಸಮಾಜ ಸೇವಕ ಪ್ರಶಸ್ತಿ ಮೊತ್ತ 10 ಸಾವಿರ ರೂ.ಗೆ 15 ಸಾವಿರ ರೂ. ಸೇರಿಸಿ ಇನ್ನೊಂದು ಶಾಲೆಗೆ ದತ್ತಿ ನೀಡುವ ಮೂಲಕ ನಾರಾಯಣ ನಾಯಕರು ಆದರ್ಶ ಮೆರೆದಿದ್ದಾರೆ.

ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಿಡುವ ನಾರಾಯಣ ನಾಯಕ್, ರಾತ್ರಿ ಎಂಟರ ಸುಮಾರಿಗೆ ಮನೆಗೆ ತಲುಪುತ್ತಾರೆ. ಇವರ ಓಡಾಟ ಯುವಕರನ್ನು ನಾಚಿಸುವಂತಿದೆ.

Comments are closed.