ಕರಾವಳಿ

ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ, ಉತ್ತಮ ಭವಿಷ್ಯ ರೂಪಿಸಿ : ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎಂ. ಶಿವಣ್ಣ

Pinterest LinkedIn Tumblr

ಮಂಗಳೂರು, ಮಾರ್ಚ್ 09 : ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದ ರೊಂದಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಿ, ಅವರನ್ನು ಉನ್ನತ ಮಟ್ಟಕ್ಕೆ ಏರುವಂತೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಾಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಹೇಳಿದರು.

ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನದ ಆವರಣದಲ್ಲಿರುವ ಮಹೋತ್ಸವ ಸಭಾಂಗಣದಲ್ಲಿ ಸ್ವಚ್ಚತಾ ಪೌರಕಾರ್ಮಿಕರೊಂದಿಗೆ ನೇರ ಸಂವಾದ ಹಾಗೂ ಧರ್ಮಸ್ಥಳದ ಮುಖ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಪೌರ ಕಾರ್ಮಿಕರು ತಮ್ಮ ದೈನಂದಿನ ಕರ್ತವ್ಯ ನಿರ್ವಹಿಸುವಾಗ ಇಲಾಖೆಯಿಂದ ನೀಡಿರುವ ಸುರಕ್ಷತಾ ಸಾಧನಗಳನ್ನು ತಮ್ಮದೇ ಬಳಸಬೇಕು. ಈ ಬಗ್ಗೆ ನಿರ್ಲಕ್ಯ ವಹಿಸಿದರೆ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರಬಹುದು ಎಂದರು.

ದೇವಸ್ಥಾನದ ಆವರಣದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಡಾ.ಡಿ ವೀರೇಂದ್ರ ಹೆಗ್ಗಡೆ ಯವರು ಹೆಚ್ಚಿನ ಎಲ್ಲಾ ಮೂಲಭೂತ ಸೌಕರ್ಯಗಳನ್ನು ನೀಡಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು. ಹಾಗೂ ಪ್ರಾಮಾಣಿಕತೆಯಿಂದ ಅಚ್ಚುಕಟ್ಟಾಗಿ ದೇವಸ್ಥಾನ ಆವರಣದಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

ಬೆಳ್ತಂಗಡಿ ಪಟ್ಟಣದಲ್ಲಿ 4 ಮಂದಿ ಪೌರಕಾರ್ಮಿಕರು ಖಾಯಂ ನಿವಾಸಿಗಳಾಗಿದ್ದು, ಅವರಲ್ಲಿ ಒಬ್ಬರಿಗೆ ಆಶ್ರಯ ವಸತಿ ಯೋಜನೆಯಡಿ ವಸತಿ ಸೌಲಭ್ಯ ನೀಡಲಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಇತರರಿಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಪೌರಕಾರ್ಮಿಕರಿಗೆ ಕಡ್ಡಾಯವಾಗಿ ಸರ್ಕಾರ ನಿಗದಿಪಡಿಸಿರುವ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಬೇಕು. ತಪಾಸಣೆ ಸಂದರ್ಭದಲ್ಲಿ ಕಾಯಿಲೆ ಇರುವುದು ಖಚಿತವಾದರೆ ಹೆಚ್ಚಿನ ಚಿಕಿತ್ಸೆ ನೀಡಬೇಕು ಎಂದ ಅವರು ಈವರೆಗೆ ನಡೆದ ಆರೋಗ್ಯ ತಪಾಸಣೆಯಲ್ಲಿ ಯಾವುದೇ ರೀತಿಯ ಕಾಯಿಲೆ ಇರುವುದು ಪೌರಕಾರ್ಮಿಕರ ದಾಖಲೆಗಳಲ್ಲಿ ಕಂಡುಬಂದಿಲ್ಲ ಎಂದರು.

ಮೆಟ್ರಿಕ್ ಪೂರ್ವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸ್ವಚ್ಚತಾ ಕಾರ್ಮಿಕರ ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲಾಗಿದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಮೊರಾರ್ಜಿ ವಸತಿ ಶಾಲೆಯಲ್ಲಿ ಉಚಿತ ಶಿಕ್ಷಣ ಸೌಲಭ್ಯವಿದ್ದು, ಪೌರ ಕಾರ್ಮಿಕರ ಮಕ್ಕಳನ್ನು ಅಂತಹ ಶಾಲೆಗಳಿಗೆ ದಾಖಲಾತಿ ಮಾಡಿ ಉತ್ತಮ ಶಿಕ್ಷಣ ನೀಡಿಬೇಕು ಎಂದ ಅವರು ಮಕ್ಕಳ ಉನ್ನತ ವ್ಯಾಸಂಗಕ್ಕೆ ಸರ್ಕಾರದಿಂದ ಸಹಾಯ ಮಾಡಲಾಗುವುದು ಎಂದರು.

ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳು ಸಂಪೂರ್ಣವಾಗಿ ನಿರ್ಬಧವಾಗಿದ್ದು, ಚರಂಡಿ ಸ್ವಚ್ಚತೆಯಲ್ಲಿ ತೊಡಗುವ ಕಾರ್ಮಿಕರು ಕಡ್ಡಾಯವಾಗಿ ಯಂತ್ರಗಳನ್ನು ಉಪಯೋಗಿಸಬೇಕು ಎಂದರು

ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ, ಸ್ನಾನಗೃಹ, ನಿವೇಶನ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆ ಎಂದರು.

ಪಟ್ಟಣ ಪಂಚಾಯತ್‍ನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅಲ್ಲಿನ ನ್ಯೂನತೆ ಗಳ ಬಗ್ಗೆ ಪರಿಶೀಲನೆ ನಡೆಸಿದರು.

ತಮ್ಮ ಪೂರ್ವಜರಿಂದ ಅದೇ ವೃತ್ತಿಯಲ್ಲಿ ತೊಡಗಿರುವ ಪೌರಕಾರ್ಮಿಕರು ಇದು ಅವರ ಮಕ್ಕಳಿಗೆ ಮುಂದುವರಿಯದಂತೆ ಶೈಕ್ಷಣಿಕ ಸೌಲಭ್ಯ ದೊರಕಬೇಕು. ಸಾಲ ಸೌಲಭ್ಯ, ನಿವೇಶನ, ವೇತನ ಹಾಗೂ ವಿವಿಧ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಬೇಕು ಎಂದರು.

ಘನತ್ಯಾಜ್ಯ ಘಟಕದಲ್ಲಿ 7 ಮಂದಿ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಕಾರ್ಮಿಕರಿಗೆ ಸಿಗುವ ವೇತನ, ಇಎಸ್ ಐ, ಪಿಎಫ್ ಗಳ ಬಗ್ಗೆ ಸರಿಯಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ.ಹೆಚ್. ಸುಧಾಕರ್, ದ.ಕ. ಉಪವಿಭಾಗದ ಕಾರ್ಮಿಕ ಅಧಿಕಾರಿ ವಿಲ್ಮಾ ತಾವ್ರೋ, ಕಾರ್ಮಿಕ ನಿರೀಕ್ಷಕರಾದ ಎಸ್.ಎನ್. ಹರೀಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೇಮಚಂದ್ರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.