ಕರಾವಳಿ

ಬಜೆಟ್‌ನಲ್ಲಿ ಕರಾವಳಿ ಭಾಗದ ಅಭಿವೃದ್ದಿಗೆ ವಿಶೇಷ ಅದ್ಯತೆ : ಸಚಿವ ಎಸ್.ಅಂಗಾರ

Pinterest LinkedIn Tumblr

ಮಂಗಳೂರು : ರಾಜ್ಯ ಬಜೆಟ್‌ನಲ್ಲಿ ಕರಾವಳಿ ಭಾಗಕ್ಕೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದು ಅಭಿವೃದ್ಧಿಗೆ ಉಜ್ವಲ ಅವಕಾಶ ದೊರೆತಿದೆ. ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಉದ್ದೇಶಿಸುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಕರಾವಳಿ ಭಾಗದ ಅಭಿವೃದ್ದಿಗೆ ವಿಶೇಷ ಅದ್ಯತೆ ನೀಡಿದ್ದಾರೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.

ಯಾಂತ್ರೀಕೃತ ದೋಣಿಗಳಿಗೆ ಡೀಸೆಲ್ ಡೆಲಿವರಿ ಪಾಯಿಂಟ್‌ನ ವಿನಾಯಿತಿ ಸಹಿತ ಡೀಸೆಲ್ ವಿತರಣೆ ಮೀನುಗಾರರಿಗೆ ವರದಾನವಾಗಲಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಅನುಷ್ಠಾನಕೆ ರಾಜ್ಯ ಸರ್ಕಾರದಿಂದ 62 ಕೋಟಿ ರೂ.ಅನುದಾನ, ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ 6 ಕೋಟಿ ರೂ.ವೆಚ್ಚದಲ್ಲಿ ಮೀನು ಉತ್ಪನ್ನಗಳ ಸಂಸ್ಕರಣೆಗೆ ಆಧುನಿಕ ಸಂಸ್ಕರಣಾ ಮತ್ತು ಮೌಲ್ಯವರ್ಧಿತ ಕೇಂದ್ರ ಸ್ಥಾಪನೆ ಸ್ವಾಗತಾರ್ಹ.

ಹಳದಿ ಎಲೆ ರೋಗ ಕುರಿತು ವೈಜ್ಞಾನಿಕ ಸಂಶೋಧನೆಗೆ ೨೫ ಕೋಟಿ ರೂ.ಮೀಸಲಿರಿಸಿದ್ದು, ಅಡಕೆ ಬೆಳೆಗಾರರ ಬೇಡಿಕೆಗೆ ಪೂರಕ ಸ್ಪಂದನೆ ದೊರೆತಿದೆ.

ಬಹುನಿರೀಕ್ಷಿತ ಕುಮ್ಕಿ ಜಮೀನು ಸಮಸ್ಯೆಗಳ ಅಧ್ಯಯನಕ್ಕೆ ಪ್ರತ್ಯೇಕ ಸಮಿತಿ ರಚನೆಯಾಗಲಿದೆ. ಜಲ ಮಾರ್ಗ ಪ್ರವಾಸೋದ್ಯಮ ಅಭಿವೃದ್ದಿ ಪಡಿಸಲು 60 ಕೋಟಿ ರೂ.ಮೀಸಲಿರಿಸಿದ್ದು ನೇತ್ರಾವತಿ ನದಿ ಗುರುಪುರ ಹಾಗೂ ಉಡುಪಿ ಜಿಲ್ಲೆಯ ಹಂಗಾರಕಟ್ಟದಿಂದ ಮಣಿಪಾಲದ ವರೆಗೆ ಜಲ ಮಾರ್ಗ ಇದರಲ್ಲಿ ಒಳಗೊಂಡಿದೆ.

10 ಕೋಟಿ ರೂ. ವೆಚ್ಚದಲ್ಲಿ ಕಡಲ ತೀರಗಳ ಅಭಿವೃದ್ದಿಯಿಂದ ಭವಿಷ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಸಚಿವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.