ಕರಾವಳಿ

ಬಾಲಕನಿಗೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ: ಅಪರಾಧಿ‌ ಚಂದ್ರ ಕೆ. ಹೆಮ್ಮಾಡಿಗೆ 10 ವರ್ಷ ಜೈಲು ಶಿಕ್ಷೆ

Pinterest LinkedIn Tumblr

ಉಡುಪಿ: ತಾನು ದಿನಪತ್ರಿಕೆಯೊಂದರ ವರದಿಗಾರನೆಂದು ಹೇಳಿಕೊಂಡು ಬಾಲಕರನ್ನು ಪುಸಲಾಯಿಸಿ ಅವರಿಗೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯವೆಸಗುವ ಆರೋಪದಡಿಯಲ್ಲಿ ಬಂಧಿತನಾಗಿದ್ದ ಚಂದ್ರ ಕೆ. ಹೆಮ್ಮಾಡಿ ಮೇಲೆ ದಾಖಲಾದ ಪ್ರತ್ಯೇಕ 21 ಪೋಕ್ಸೋ ಪ್ರಕರಣದ ಪೈಕಿ ಮೊದಲ ಒಂದು ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಆರೋಪಿಯು ದೋಷಿ ಎಂದು ತೀರ್ಪು ಪ್ರಕಟಿಸಿದ್ದಾರೆ.

ಚಂದ್ರ ಕೆ. ಹೆಮ್ಮಾಡಿ ಎನ್ನುವಾತ ಅಪರಾಧಿಯಾಗಿದ್ದು ಆತನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಢ ವಿಧಿಸಿ ಆದೇಶಿಸಲಾಗಿದೆ.

ಘಟನೆ ಹಿನ್ನೆಲೆ…
ಚಂದ್ರ ಕೆ. ಹೆಮ್ಮಾಡಿಯು ತಾನು ವರದಿಗಾರನೆಂದು ಹೇಳಿಕೊಂಡು ಬೈಂದೂರು ಭಾಗದ ಗ್ರಾಮೀಣ ಪ್ರದೇಶಕ್ಕೆ ತೆರಳಿ ಅಲ್ಲಿನ ಬಾಲಕನೋರ್ವನಿಗೆ ತಾನು ಪ್ರಾಣಿ, ಪಕ್ಷಿ, ಶಾಲಾ ಕಟ್ಟಡದ ಛಾಯಾಚಿತ್ರ ತೆಗೆಯಲು ತನ್ನ ಜೊತೆ ಬರುವಂತೆ ಪುಸಲಾಯಿಸಿ ಕರೆದೊಯ್ದು ಆತನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಘಟನೆ ಬಳಿಕ 11 ವರ್ಷದ ಬಾಲಕನು ಮಾನಸಿಕವಾಗಿ ತೊಂದರೆಗೀಡಾಗಿದ್ದು ಆತನನ್ನು ಮಣಿಪಾಲ‌ದ ಮಾನಸಿಕ ತಜ್ಞರ ಬಳಿ‌ಕರೆದೊಯ್ದು ಕೌನ್ಸೆಲಿಂಗ್ ಮಾಡಿಸಿದಾಗ ತನ್ನ ಮೇಲೆ ದೌರ್ಜನ್ಯ ನಡೆದಿರುವುದು ಹೇಳಿಕೊಂಡಿದ್ದ. ಈ ಬಗ್ಗೆ ಪೋಷಕರು ಬಾಲಕನನ್ನು ವಿಚಾರಿಸಿದಾಗ ಚಂದ್ರ ಹೆಮ್ಮಾಡಿ ಕುಕೃತ್ಯ ಬೆಳಕಿಗೆ ಬಂದಿದ್ದು ಬೈಂದೂರು ಠಾಣೆಗೆ ದೂರು ನೀಡಲಾಗಿ 2018 ನವೆಂಬರ್ ತಿಂಗಳಿನಲ್ಲಿ ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು‌. ಇದೊಂದು ಘಟನೆ ಬೆಳಕಿಗೆ ಬರುತ್ತಲೆ ಹಲವು ಬಾಲಕರು ಪೋಷಕರಿಗೆ ವಿಚಾರ ತಿಳಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಈತನ ಮೇಲೆ ಪೋಕ್ಸೋ ಕಾಯ್ದೆಯಡಿ ಬೈಂದೂರು, ಕೊಲ್ಲೂರು ಸಹಿತ ವಿವಿಧ ಠಾಣೆಗಳಲ್ಲಿ 21 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

 

 

ಈ ಪೈಕಿ ಮೊದಲ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಶಿಕ್ಷೆ ವಿಧಿಸಲಾಗಿದೆ.‌‌ ದಂಡದ 10 ಸಾವಿರದಲ್ಲಿ 5 ಸಾವಿರ ಸರಕಾರಕ್ಕೆ, 5 ಸಾವಿರ ನೊಂದ ಬಾಲಕನಿಗೆ ನೀಡಲು ಆದೇಶ ನೀಡಲಾಗಿದೆ. ಈ ಪ್ರಕರಣದಲ್ಲಿ ಅಂದಿನ ಬೈಂದೂರು ಸಿಪಿಐ ಪರಮೇಶ್ವರ್ ಆರ್. ಗುನಗ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು 36 ಸಾಕ್ಷಿಗಳಲ್ಲಿ ಸಂತ್ರಸ್ತ ಬಾಲಕನ ಸಹಿತ 15 ಮಂದಿ ಸಾಕ್ಷಿ ನುಡಿದಿದ್ದರು.

ಉಡುಪಿಯ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

(ವರದಿ-  ಯೋಗೀಶ್ ಕುಂಭಾಸಿ)

 

Comments are closed.