ಕರಾವಳಿ

ಜನಪ್ರತಿನಿಧಿಗಳು ಸಮಾಜ, ಸಮುದಾಯವನ್ನು ಮರೆಯದೆ ಸಮಾಜದ ಪ್ರತಿನಿಧಿಗಳಾಗಿ ಕೆಲಸ ಮಾಡ ಬೇಕು : ಜಯಪ್ರಕಾಶ್ ಹೆಗ್ಡೆ

Pinterest LinkedIn Tumblr

ಗ್ರಾ.ಪಂ. ಸದಸ್ಯರಿಗೆ ಬಂಟರ ಯಾನೆ ನಾಡವರ ಮಾತೃ ಸಂಘದಿಂದ ಅಭಿನಂದನೆ

ಮಂಗಳೂರು: ಜನಪ್ರತಿನಿಧಿಗಳಾದ ಬಳಿಕ ಸಮಾಜದ ಎಲ್ಲ ಜನರ ಪ್ರತಿನಿಧಿ ಎಂಬ ಪ್ರಜ್ಞೆ ಸದಾ ಇರಬೇಕು. ಹಾಗಾಗಿ ಸಮುದಾಯದ ಪ್ರತಿನಿಧಿಗಳಾಗದೆ ಸಮಾಜದ ಪ್ರತಿನಿಧಿಯಾಗಿ ಸೇವೆ ಸಲ್ಲಿಸಬೇಕು. ಜನಪ್ರತಿನಿಧಿ ಯಾಗಿರುವುದು ಸಾರ್ಥಕ ಎಂಬ ಭಾವನೆ ತಮ್ಮೆಳಗೆ ಮೂಡುವಂತಹ ಜನಪರ ಕೆಲಸ ಮಾಡಲು ಕಟಿಬದ್ಧರಾಗಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಸಲಹೆ ನೀಡಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ದ.ಕ., ಉಡುಪಿ, ಕಾಸರಗೋಡು ಜಿಲ್ಲೆಯ ಗ್ರಾಪಂಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸದಸ್ಯರು, ಉಪಾಧ್ಯಕ್ಷರು, ಅಧ್ಯಕ್ಷರ ಸಹಿತ ಸುಮಾರು ೮೦೦ಕ್ಕೂ ಅಧಿಕ ಜನಪ್ರತಿನಿಧಿಗಳಿಗೆ ಬಂಟ್ಸ್ ಹಾಸ್ಟೆಲ್ ಆವರಣದಲ್ಲಿ ರವಿವಾರ ನಡೆದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣಗೈದರು.

ಗ್ರಾಮೀಣ ಭಾಗದ ಜನರ ಮಧ್ಯೆ ಬೆರೆತುಕೊಂಡು ಕೆಲಸ ಮಾಡುವ ಜನಪ್ರತಿನಿಧಿಗಳು ತನ್ನ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದ ಅವರು ಕೆಲವು ಗ್ರಾಮಗಳಲ್ಲಿ ’ಭಯಂಕರ ಪ್ರಾಮಾಣಿಕ’ ಅಧಿಕಾರಿಗಳಿರುತ್ತಾರೆ. ಜನರ ಕೆಲಸ ಮಾಡಿಕೊಡಲು ಕಾನೂನಿನ ಅಡ್ಡಿ, ತೊಡಕುಗಳ ಬಗ್ಗೆ ಹೇಳಿ ಆತಂಕ ವ್ಯಕ್ತಪಡಿಸುತ್ತಾರೆ. ಅಂತಹವರನ್ನು ಪ್ರಶ್ನಿಸಿ ಕಾನೂನಿನ ಇತಿಮಿತಿಯೊಳಗೆ ಕೆಲಸ ಮಾಡಿಕೊಡಲು ಶ್ರಮಿಸಬೇಕು ಎಂದರು.

ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಮಾತನಾಡಿ, ಬಂಟ ಸಮಾಜದ ೮೦೦ ಪ್ರತಿನಿಧಿಗಳು ಕೇವಲ ಸ್ವಸಮಾಜದ ಮತದಾರರ ಮತದಿಂದ ಗೆಲುವು ಪಡೆದವರಲ್ಲ. ತಮ್ಮ ಗೆಲುವಿಗೆ ಎಲ್ಲಾ ಸಮಾಜದ ಮತದಾರರ ಶ್ರಮವಿದೆ. ಹಾಗಾಗಿ ಅಭಿವೃದ್ಧಿಯಲ್ಲಿ ಜಾತಿ, ಮತ ಬೇಡ. ನಮ್ಮ ಹಿರಿಯರು ಸೌಹಾರ್ದ ಸಮಾಜ ಕಟ್ಟಲು ಪ್ರಯತ್ನಿಸಿದವರು. ಸಮಾಜದಲ್ಲಿ ಶ್ರೀಮಂತರಿದ್ದರೂ ಕೂಡ ಸಾವಿರಾರು ಮಂದಿ ಬಡವರಿದ್ದಾರೆ. ಜನರ ಕೆಲಸ ಮಾಡಿಸಿಕೊಡುವುದರೊಂದಿಗೆ ಸಮಾಜದ ಬಡವರ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ ಎಂದು ಹೇಳಿದರು.

ಗೆದ್ದ ಬಳಿಕ ಸಮಾಜ, ಸಮುದಾಯವನ್ನು ಮರೆತು ಬಿಡುವುದು ಒಳ್ಳೆಯ ಲಕ್ಷಣವಲ್ಲ. ಮೀಸಲಾತಿಗೆ ಸಂಬಂಧಿಸಿದಂತೆ ಸಂಘವು ಬಂಟ ಸಮಾಜಕ್ಕೆ ಸೇರಿದ ಜನಪ್ರತಿನಿಧಿಗಳ ಬಳಿ ತೆರಳಿ ಅಹವಾಲು ಸಲ್ಲಿಸಿದಾಗ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷದಿಂದ ಬಂಟ ಸಮಾಜದ ಅದೆಷ್ಟೋ ಮಂದಿಗೆ ಅರ್ಹತೆ ಇದ್ದರೂ ಕೂಡ ಸರಕಾರಿ ಉದ್ಯೋಗ ಪಡೆಯಲು ಸಾಧ್ಯವಾಗಲಿಲ್ಲ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ ಶೆಟ್ಟಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ರೈ, ಜೊತೆ ಕಾರ್ಯದರ್ಶಿ ಸಂಜೀವ ಶೆಟ್ಟಿ ಸಂಪಿಗೆಡಿ, ಅಭಿನಂದನಾ ಸಮಿತಿಯ ಸಂಚಾಲಕರಾದ ಉಲ್ಲಾಸ್ ಆರ್. ಶೆಟ್ಟಿ, ದಿವಾಕರ ಸಾಮಾನಿ ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ ಮತ್ತು ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಎ. ಹೇಮನಾಥ ಶೆಟ್ಟಿ ಕಾವು ವಂದಿಸಿದರು. ಅಭಿಷೇಕ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ ಕೋಡಿಯಾಲ್ ಬೈಲ್ ಅಭಿನಂದನಾ ಕಾರ್ಯಕ್ರಮ ನಿರ್ವಹಿಸಿದರು.

Comments are closed.