ಉಡುಪಿ: ಕಿವಿ ಕೇಳಿಸದ, ಮಾತನಾಡಲು ಬಾರದ 15 ವರ್ಷ ಪ್ರಾಯದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಲು ಕಾರಣನಾದ ಅಪರಾಧಿ ಹರೀಶ್ (33) ಎನ್ನುವಾತನಿಗೆ 15 ವರ್ಷ ಕಠಿಣ ಜೈಲು ಶಿಕ್ಷೆ, 15 ಸಾವಿರ ದಂಡ ಹಾಗೂ ಸರಕಾರದಿಂದ ಸಂತ್ರಸ್ತ ಪರಿಹಾರ ನಿಧಿಯಡಿ ನೊಂದ ಬಾಲಕಿಗೆ 9 ಲಕ್ಷ ನೀಡಲು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ್ ವನಮಾಲಾ ಆನಂದರಾವ್ ಅವರು ಫೆ. 26ರಂದು ಮಹತ್ವದ ಆದೇಶ ನೀಡಿದ್ದಾರೆ.
(ಸಾಂದರ್ಭಿಕ ಚಿತ್ರ)
ಅಪರಾಧಿ ಹರೀಶನಿಗೆ ಬಾಲಕಿ ಅತ್ಯಾಚಾರದ ಹಿನ್ನೆಲೆ ಪೋಕ್ಸೋ ಕಾಯ್ದೆಯಡಿ 15 ವರ್ಷ ಕಠಿಣ ಜೈಲು ಶಿಕ್ಷೆ, 15 ಸಾವಿರ ದಂಡ ವಿಧಿಸಲಾಗಿದೆ. ದಂಡ ಕಟ್ಟದಿದ್ದರೆ ಮತ್ತೆ ಒಂದು ವರ್ಷ ಜೈಲು ವಾಸ ಅನುಭವಿಸಲು ಮತ್ತು 15 ಸಾವಿರ ದಂಡದಲ್ಲಿ ಹತ್ತು ಸಾವಿರ ಸಂತ್ರಸ್ತೆಗೆ 5 ಸಾವಿರ ಸರಕಾರಕ್ಕೆ ನೀಡಲು ಆದೇಶ ನೀಡಲಾಗಿದೆ.
(ಸಾಂದರ್ಭಿಕ ಚಿತ್ರ)
ಘಟನೆ ಹಿನ್ನೆಲೆ….
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018ರ ಡಿಸೆಂಬರ್ ತಿಂಗಳಿನಲ್ಲಿ 15 ವರ್ಷದ ತನ್ನ ಮನೆ ಸಮೀಪದ ಬಾಲಕಿಯನ್ನು ನೆರೆಕೆರೆ ನಿವಾಸಿ ಹರೀಶ್ ನಿರ್ಮಾಣ ಹಂತದ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ಸಂತ್ರಸ್ತ ಬಾಲಕಿಗೆ ಕಿವಿ ಕೇಳದ, ಮಾತನಾಡಲು ಬಾರದ ಹಿನ್ನೆಲೆ ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. 2019ರಲ್ಲಿ ಒಂದು ದಿನ ರಾತ್ರಿ ಆಕೆ ಹೊಟ್ಟೆನೋವಿನಿಂದ ಬಳಲಿ ತೀವ್ರ ರಕ್ತಸ್ರಾವವಾದಾಗ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಬಳಿಕ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಬಾಲಕಿ 7ನೇ ತರಗತಿ ಓದಿದ್ದು ಪಕ್ಕದ ಮನೆಯ ಹರೀಶನನ್ನು ಕೈ ಸನ್ನೆ ಹಾಗೂ ಬರವಣಿಗೆ ಮೂಲಕ ಗುರುತಿಸಿದ ಹಿನ್ನೆಲೆ ಫೋಕ್ಸೋ ಕಾಯ್ದೆಯಡಿ ಆತನನ್ನು ಬಂಧಿಸಲಾಗಿತ್ತು. ಅಂದಿನ ಕಾರ್ಕಳ ಪ್ರಭಾರ ಸಿಪಿಐ ಮಹೇಶ್ ಪ್ರಸಾದ್ ಮೊದಲಿಗೆ ತನಿಖೆ ನಡೆಸಿದ್ದು ಬಳಿಕ ಸಿಪಿಐ ಸಂಪತ್ ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 22 ಸಾಕ್ಷಿಗಳ ಪೈಕಿ ಸಂತ್ರಸ್ತೆ ತಾಯಿ ಸೇರಿದಂತೆ 13 ಮಂದಿ ಸಾಕ್ಷ್ಯ ನುಡಿದಿದ್ದರು. ಡಿ.ಎನ್.ಎ ವರದಿ ಕೂಡ ಅಭಿಯೋಜನೆಗೆ ಪೂರಕವಾಗಿತ್ತು. ನ್ಯಾಯಾಲಯದಲ್ಲಿಯೂ ಕೂಡ ತಾಂತ್ರಿಕವಾಗಿ ವಿಶೇಶ ರೀತಿಯಲ್ಲಿ ಬಾಲಕಿ ಸಾಕ್ಷ್ಯ ವಿಚಾರಣೆ ನಡೆದಿತ್ತು.
(ಸಾಂದರ್ಭಿಕ ಚಿತ್ರ)
ಸಂತ್ರಸ್ತೆಗೆ ಗರಿಷ್ಟ ಮೊತ್ತದ ಪರಿಹಾರ…
15 ವರ್ಷದ ಸಂತ್ರಸ್ತ ಬಾಲಕಿ ಮೂಗಿ ಹಾಗೂ ಕಿವುಡಿಯಾಗಿದ್ದು ಆಕೆ ಪೋಷಕರ ಪಾಲನೆಯಲ್ಲಿದ್ದಾಳೆ. ಈ ಘಟನೆ ಬಳಿಕ ಆಕೆ ಮಗುವಿನ ಲಾಲನೆಯು ಕೂಡ ಪೋಷಕರದ್ದಾಗಿದೆ. ನೊಂದ ಬಡ ಕುಟುಂಬ ಜೀವನ ಸಾಗಿಸಲು ಹಾಗೂ ಮುಂದೆ ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ, ಸಂತ್ರಸ್ತೆ ಜೀವನದ ಭದ್ರತೆಗಾಗಿ ಗರಿಷ್ಟ ಪರಿಹಾರವನ್ನು ನೀಡಬೇಕು. ಮಾತ್ರವಲ್ಲ ಮೂಗಿ, ಕಿವುಡಿಯಾದ ಬಾಲಕಿಯ ಅತ್ಯಾಚಾರ ಅಪರಾಧಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಉಡುಪಿಯ ವಿಶೇಷ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು. ಅವರ ವಾದ ಪುರಸ್ಕರಿಸಿದ ನ್ಯಾಯಾಧೀಶರು ಅಪರಾಧಿಗೆ 15 ವರ್ಷ ಜೈಲು ನೀಡಿದ್ದಾರೆ. ಸಂತ್ರಸ್ತ ಬಾಲಕಿಗೆ ಸರಕಾರದಿಂದ 9 ಲಕ್ಷ ಪರಿಹಾರ ನೀಡಲು ಆದೇಶಿಸಿದ್ದಾರೆ. ಪೋಕ್ಸೋ ಪ್ರಕರಣದಲ್ಲಿ ಇಷ್ಟು ಮೊತ್ತದ ಪರಿಹಾರ ನೀಡಿದ್ದು ಉಡುಪಿಯಲ್ಲಿ ಇದು ಮೊದಲ ಬಾರಿಗೆ.
(ವರದಿ- ಯೋಗೀಶ್ ಕುಂಭಾಸಿ)