ಮಂಗಳೂರು, ಫೆಬ್ರವರಿ.25: ನಗರದ ಉರ್ವಸ್ಟೋರ್ ಸಮೀಪದ ದಡ್ಡಲ್ ಕಾಡ್ ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಅವಹೇಳನಕಾರಿ ಬರಹ ಹಾಗು ಕಾಂಡೋಮ್ ಪತ್ತೆಯಾಗಿದೆ.
ಗುರುವಾರ ನಸುಕಿನ ಜಾವ ದುಷ್ಕರ್ಮಿಗಳು ಈ ಕೃತ್ಯ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಸ್ಥಳಕ್ಕೆ ಸ್ಥಳೀಯ ಕಾರ್ಪೊರೇಟರ್, ಮಾಜಿ ಮೇಯರ್ ಎಂ. ಶಶಿಧರ್ ಹೆಗ್ಡೆ ಹಾಗು ಉರ್ವ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದೇ ವೇಳೆ ದಡ್ಡಲ್ ಕಾಡು ಶ್ರೀ ಕೋಟೆದ ಬಬ್ಬುಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಅಪವಿತ್ರಗೊಳಿಸಿದ ವಿಚಾರ ತಿಳಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್ ಅವರು ಸ್ಥಳಕ್ಕೆ ಭೇಟಿ ನೀಡಿ ಈ ಕುರಿತು ಮಾಹಿತಿ ಪಡೆದಿದ್ದು, ಅಪರಾಧಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರಗಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಮತ್ತೆ ಮತ್ತೆ ಮರುಕಳಿಸುತ್ತಿರುವ ಹೇಯ ಕೃತ್ಯ: ವ್ಯಾಪಕ ಆಕ್ರೋಷ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಕುಕೃತ್ಯ ನಡೆಯುತ್ತಿದ್ದು, ಪೊಲೀಸರು ದುಷ್ಕರ್ಮಿಗಳನ್ನು ಇದುವರೆಗೆ ಬಂಧಿಸದೇ ಇರುವುದರಿಂದ ಈ ಹೇಯ ಕೃತ್ಯ ಮತ್ತೆ ಮತ್ತೆ ಮರುಕಳಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಜೊತೆಗೆ ಈ ಬಗ್ಗೆ ವ್ಯಾಪಕ ಆಕ್ರೋಷ ವ್ಯಕ್ತವಾಗಿದೆ.
ಮಂಗಳೂರು ಕಂಕನಾಡಿ ಗರೋಡಿ ದೇವಸ್ಥಾನ, ಅತ್ತಾವರ ಬಾಬುಗುಡ್ಡೆ ಬಬ್ಬುಸ್ವಾಮಿ ದೈವಸ್ಥಾನ, ಪಂಪುವೆಲ್ ಕಲ್ಲುರ್ಟಿ ಕಲ್ಕುಡ ದೈವಸ್ಥಾನ, ಉಜ್ಜೋಡಿ ಮಹಾಕಾಳಿ ದೈವಸ್ಥಾನ, ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ, ಬೊಕ್ಕಪಟ್ನ ಅಯ್ಯಪ್ಪ ದೇವಸ್ಥಾನ, ಉಳ್ಳಾಲ ಕೊರಗಜ್ಜ ದೈವಸ್ಥಾನದ ಕಾಣಿಕೆ ಹುಂಡಿಗೆ ಬಳಸಿದ ಕಾಂಡೋಮ್ ಗಳನ್ನ ಹಾಕಿ ಅಪವಿತ್ರಗೊಳಿಸಿದಲ್ಲದೆ ದೇವರ ನಿಂದನೆಯ ಮತ್ತು ಧರ್ಮ ವಿರೋಧಿ ಬರಹಗಳನ್ನು ಬರೆದು ಹಾಕಿ ಜೊತೆಗೆ ಅಪವಿತ್ರ ಗೊಳಿಸಿರುವುದರ ಬಗ್ಗೆ ದೂರು ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರ ಗೊಳಿಸುವ ಕುಕೃತ್ಯ ನಿರಂತರವಾಗಿ ನಡೆಯುತ್ತಿದೆ. ಆದರೆ ಈ ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನೈಜ್ಯ ಆರೋಪಿಗಳ ಪತ್ತೆಯಾಗಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.