ಕರ್ನಾಟಕ

ವಿವಾದಿತ ಆಡಿಯೋ ಬಗ್ಗೆ ದರ್ಶನ್ ಮೌನವಹಿಸಿರುವುದಕ್ಕೆ ಮನನೊಂದ ಜಗ್ಗೇಶ್ ಹೇಳಿದ್ದೇನು?

Pinterest LinkedIn Tumblr

 ಮೈಸೂರು, ಫೆಬ್ರವರಿ 24:: ದರ್ಶನ್ ಬಗ್ಗೆ ಜಗ್ಗೇಶ್​ ಮಾತನಾಡಿದ್ದಾರೆ ಎನ್ನಲಾದ ವಿವಾದಿತ ಆಡಿಯೋ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ನಟ ದರ್ಶನ್ ಮೌನವಹಿಸಿರುವುದಕ್ಕೆ ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದರ್ಶನ್ ಅಭಿಮಾನಿಗಳ ಬಗ್ಗೆ ಜಗ್ಗೇಶ್​ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಬಿಡುಗಡೆ ಆದಾಗಿನಿಂದ ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಆಡಿಯೋ ಕೇಳಿದ ದರ್ಶನ್​ ಅಭಿಮಾನಿಗಳು ತೋತಾಪುರಿ ಚಿತ್ರದ ಶೂಟಿಂಗ್​ ಸೆಟ್​ಗೆ ತೆರಳಿ ಜಗ್ಗೇಶ್​ ಅವರನ್ನು ಮುತ್ತಿಗೆ ಹಾಕಿ ಗಲಾಟೆಯನ್ನೂ ಮಾಡಿದ್ದಾರೆ. ಸುಮಾರು 15-20 ಜನ ಬಂದು ಜಗ್ಗೇಶ್​ ಅವರಿಗೆ ಧಿಕ್ಕಾರ ಎಂದೂ ಕೂಗಿದ್ದಾರೆ. ಈ ಎಲ್ಲ ಘಟನೆಗಳಿಂದ ಮನನೊಂದ ಜಗ್ಗೇಶ್​ ಬೇಸರ ವ್ಯಕ್ತಪಡಿಸಿದ್ದಾರೆ.

ಇಂದು ಬನ್ನೂರಿನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ತಮ್ಮ ಬೇಸರ ಹೊರಹಾಕಿರುವ ಹಿರಿಯ ನಟ ಜಗ್ಗೇಶ್, ಇಂತಹ ಸಮಯದಲ್ಲಿ ದರ್ಶನ್ ಆ ಹುಡುಗರಿಗೆ ನೀವು ಯಾಕೆ ಹೀಗೆ ಮಾಡ್ತಿದಿರಿ ಅಂತ ಕೇಳಬೇಕಿತ್ತು. ನನಗಾದರೂ ಕಾಲ್ ಮಾಡಿ ಮಾತಾಡಬೇಕಿತ್ತು. ಇದರಿಂದ ನನಗೆ ತುಂಬ ನೋವಾಯಿತು. ಇದು ನಮ್ಮ ಹಿರಿಯರ ದೌರ್ಭಾಗ್ಯ ಎಂದರು.

ನಾನು ಮಾತನಾಡಿದ್ದು ನಟ ದರ್ಶನ್​ ಬಗ್ಗೆ ಅಲ್ಲ, ವೆಬ್​ಡಿಸೈನರ್​ ದರ್ಶನ್​ ಬಗ್ಗೆ ಎಂದೂ ಕೂಡ ಹೇಳಿದ್ದಾರೆ. ಇಷ್ಟೆಲ್ಲ ಆದರೂ ನಟ ದರ್ಶನ್ ಇದುವರೆಗೂ ಒಂದೇ ಒಂದು ಪ್ರತಿಕ್ರಿಯೆಯನ್ನೂ ನೀಡಿಲ್ಲ. ದರ್ಶನ್ ಅವರನ್ನು ನಾನು ಬಹಳ ಪ್ರೀತಿಸುತ್ತೇನೆ, ಆತ ಸಂಕಷ್ಟದಲ್ಲಿರುವಾಗ ಕನ್ನಡ ಚಿತ್ರರಂಗದ ಯಾವ ನಟರು ನೆರವಿಗೆ ಬಂದರು ? ಅಂದು ನಾನು ಹಾಗೂ ಸಾರಾ ಗೋವಿಂದು ದರ್ಶನ್ ಪರ ನಿಂತೆವು. ಇದನ್ನು ದರ್ಶನ್ ಇಂದು ನೆನಪು ಮಾಡಿಕೊಳ್ಳಲಿಲ್ಲ ಎಂದು ಜಗ್ಗೇಶ್ ಬೇಸರಿಸಿಕೊಂಡರು.

ನಾವೆಲ್ಲ ಕನ್ನಡದ ಬಗ್ಗೆ ಮಾತಾಡಬೇಕು, ಕನ್ನಡತನ ಉಳಿಸಬೇಕು, ಚಿತ್ರರಂಗದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕೆನ್ನುವ ಕನಸು ಹಾಗೂ ಹಿರಿಯರ ಮಾತು ಕೇಳಿ ಬೆಳೆದವರು. ಈ ವಿಚಾರ ದೊಡ್ಡದು ಮಾಡಬಾರದೆಂದು ಮೌನವಾಗಿದ್ದೆ. ಅಂದು ಕೂಡ ದರ್ಶನ್ ಅಭಿಮಾನಿಗಳಿಗೆ ಸೂಕ್ಷ್ಮವಾಗಿ ತಿಳಿಹೇಳಲು ಪ್ರಯತ್ನಿಸಿದೆ. ಆದರೆ, ಅವರು ನನ್ನ ಮಾತು ಕೇಳಲಿಲ್ಲ. ಅಂದು ಬಂದವರು ತಾಳ್ಮೆಯಿಂದ ಮಾತಾಡಿದ್ದರೆ ನನಗೆ ಖುಷಿಯಾಗುತ್ತಿತ್ತು. ಈ ವಿಚಾರವನ್ನು ಮುಂದಕ್ಕೆ ಬೆಳೆಸಬೇಡಿ.ಇಲ್ಲಿಗೆ ನಿಲ್ಲಿಸಿಬಿಡಿ ಎಂದು ಮನವಿ ಮಾಡಿದರು.

Comments are closed.