ಕರಾವಳಿ

ಎಟಿಎಂ ನಲ್ಲಿ ಸ್ಕಿಮ್ಮಿಂಗ್ ಉಪಕರಣ ಅಳವಡಿಸಿ ಹಣ ಲೂಟಿಗೈಯಲು ಯತ್ನ :ಇಬ್ಬರು ವಂಚಕರ ಬಂಧನ

Pinterest LinkedIn Tumblr

ಮಂಗಳೂರು, ಫೆಬ್ರವರಿ.24: ಎಟಿಎಂ ನಲ್ಲಿ ಸ್ಕಿಮ್ಮಿಂಗ್ ಉಪಕರಣ ಅಳವಡಿಸಿ ಗ್ರಾಹಕರ ಹಣ ಲೂಟಿಗೈಯಲು ಯತ್ನಿಸಿದ ಇಬ್ಬರು ವಂಚಕರನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಈ ಮೂಲಕ ಬ್ಯಾಂಕ್‌ಗಳಿಗೆ ಸೇರಿದ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಯಂತ್ರದ ಉಪಕರಣ ಅಳವಡಿಸಿ ಹಣ ವಂಚಿಸುವ ಬೃಹತ್ ಜಾಲವೊಂದು ಮಂಗಳೂರಲ್ಲಿ ಪತ್ತೆಯಾಗಿದೆ.

ಮಂಗಳೂರು ನಗರದ ಹಲವು ಕಡೆಗಳಲ್ಲಿ ಎಟಿಎಂ ಯಂತ್ರಗಳನ್ನು ಸ್ಕಿಮ್ಮಿಂಗ್ ಮಾಡಿ, ಬ್ಯಾಂಕ್ ಖಾತೆಗಳಿಂದ ಹಣ ಲಪಟಾಯಿಸುತ್ತಿದ್ದ ಕೃತ್ಯಕ್ಕೆ ಸಂಬಂಧಿಸಿ ದಿಲ್ಲಿ ಮೂಲದ ವ್ಯಕ್ತಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಮಂಗಳಾದೇವಿಯಲ್ಲಿರುವ ಪೆಟ್ರೋಲ್ ಬಂಕ್ ಎದುರಿನಲ್ಲಿರುವ ಎಸ್‌ಬಿಐ ಎಟಿಎಂನಲ್ಲಿ‌ ರವಿವಾರದಂದು ಈ ವಂಚಕರು ಸ್ಕಿಮ್ಮಿಂಗ್ ಉಪಕರಣ ಅಳವಡಿಸಲು ಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಸ್ಥಳಿಯ ಪೆಟ್ರೋಲ್ ಬಂಕ್ ನ ಇಬ್ಬರು ಸಿಬ್ಬಂದಿಗಳು ಹಾಗು ಓರ್ವ ಪೊಲೀಸ್ ಸಿಬ್ಬಂದಿ ಇವರನ್ನು ಸೆರೆ ಹಿಡಿಯಲು ಹೋದಾಗ ವಂಚಕರು ತಪ್ಪಿಸಲು ಯತ್ನಸಿದ್ದಾರೆ.

ಕೂಡಲೇ ಮೂವರು ಸೇರಿ ಇಬ್ಬರು ವಂಚಕರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚಿಲಿಂಬಿಯಲ್ಲೂ ಸ್ಕಿಮ್ಮಿಂಗ್ ಯಂತ್ರ ಅಳವಡಿಕೆ:

ಚಿಲಿಂಬಿಯ ಗಾಂಧೀನಗರದ ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿಯೂ ಅದೇ ದಿನ (ಫೆ.21) ಬೆಳಗ್ಗೆ 9:47ಕ್ಕೆ ದುಷ್ಕರ್ಮಿಗಳು ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಹಣ ವಂಚನೆಗೆ ವಿಫಲ ಯತ್ನ ನಡೆಸಿದ್ದಾರೆ. ಮರುದಿನ (ಫೆ.22) ಬ್ಯಾಂಕ್‌ನ ಕಾರ್ಯ ನಿರ್ವಹಣೆಯ ಸಮಯ ದಲ್ಲಿ ಎಟಿಎಂಗೆ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ರುವುದು ಪತ್ತೆಯಾಗಿದೆ. ಬಳಿಕ ಬ್ಯಾಂಕ್ ಅಧಿಕಾರಿ ಕೆನರಾ ಬ್ಯಾಂಕ್‌ನ ಮುಖ್ಯ ಪ್ರಬಂಧಕ ರಾಜೇಶ್ ಪೈ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಂಧಿತರಲ್ಲಿ ಒಬ್ಬ ದಿಲ್ಲಿ ಹಾಗೂ ಇನ್ನೊಬ್ಬಾತ ಕಾಸರಗೋಡಿನ ನಿವಾಸಿ ಎಂದು ತಿಳಿದು ಬಂದಿದೆ. ಸ್ಕಿಮ್ಮಿಂಗ್ ಕೃತ್ಯದಲ್ಲಿ ಒಟ್ಟು 6 ಮಂದಿಯ ತಂಡದ ಕೃತ್ಯ ಶಾಮೀಲಾಗಿದ್ದು, ಕೃತ್ಯದ ಕಿಂಗ್‌ಪಿನ್ ಸೇರಿದಂತೆ ಉಳಿದ ಆರೋಪಿಗಳಿಗೆ ಶೋಧ ಮುಂದುವರಿದಿದೆ. ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

‘ಸ್ಕಿಮ್ಮಿಂಗ್’ ಅಂದರೆ ಏನು?

ಎಟಿಎಂ ಯಂತ್ರಗಳಲ್ಲಿ ದುಷ್ಕರ್ಮಿಗಳು ಸೂಕ್ಷ್ಮ ಉಪಕರಣ ಅಳವಡಿಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಕಳವು ಮಾಡಲಾಗುತ್ತದೆ. ಇದಕ್ಕಾಗಿ ವಂಚಕರು ಅಳವಡಿಸುವ ಉಪಕರಣವು ಬಳಕೆದಾರರು ಎಟಿಎಂ ಕಾರ್ಡ್ ಸ್ವೈಪ್ ಮಾಡಿದಾಗ ಅದರಲ್ಲಿರುವ 16 ಅಂಕಿಗಳ ಸಂಖ್ಯೆ ಮತ್ತು ಸಿವಿಸಿ ಸಂಖ್ಯೆಗಳನ್ನು ದಾಖಲಿಸಿಕೊಳ್ಳುತ್ತದೆ. ನಂತರ ನಕಲಿ ಕಾರ್ಡ್ ತಯಾರಿಸಿ ಹಣ ವಿದ್‌ಡ್ರಾ ಮಾಡುವುದಕ್ಕೆ ‘ಸ್ಕಿಮ್ಮಿಂಗ್’ ಎಂದು ಕರೆಯಲಾಗುತ್ತದೆ.

Comments are closed.