ಮಂಗಳೂರು: ಶತಮಾನಗಳ ಇತಿಹಾಸ ಹೊಂದಿದ ಫರಂಗಿಪೇಟೆ ಶ್ರೀ ರಾಮ ವಿದ್ಯಾ ಸಂಸ್ಥೆಗೆ ಮಹೇಶ್ ಮೋಟಾರ್ಸ್ ಮಾಲಕರಾದ ಎ.ಕೆ.ಜಯರಾಮ ಶೇಕ ದಂಪತಿ ನೂತನವಾಗಿ ನಿರ್ಮಿಸಿ ಕೊಟ್ಟ *’ಜಯ-ಪದ್ಮ ಗೋಲ್ಡನ್ ಜ್ಯೂಬಿಲಿ ಹಾಲ್*’ ನ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಜರಗಿತು.
ಶಾಲಾ ಶತಮಾನೋತ್ಸವ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾಗಿ ಶತಮಾನೋತ್ಸವ ಕಟ್ಟಡ ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಎ.ಕೆ. ಜಯರಾಮ ಶೇಕ ಅವರು ಇದೀಗ ಶಾಲೆಯ ನಿರ್ವಹಣಾ ವೆಚ್ಚ ಭರಿಸುವ ಕಷ್ಟವನ್ನರಿತು ಶಾಲಾ ಕಟ್ಟಡದ ಮೇಲ್ಛಾವಣಿಯಲ್ಲಿ , ಮದುವೆ ಮತ್ತಿತರ ಶುಭ ಸಮಾರಂಭ ಗಳಿಗಾಗಿ ಬಾಡಿಗೆಗೆ ನೀಡುವ ಉದ್ದೇಶದಿಂದ ಸುಸಜ್ಜಿತ ಸಭಾಂಗಣ ನಿರ್ಮಿಸಿದರು.
ಫರಂಗಿಪೇಟೆ ರೋಟರಿ ಕ್ಲಬ್ ನ ಸ್ಥಾಪಕಾಧ್ಯಕ್ಷರೂ ಆದ ಜಯರಾಮ ಶೇಕರು ಶಾಲೆಗೆ ಕೊಡುಗೆಯಾಗಿ ನೀಡಿದ ಸಭಾಂಗಣವನ್ನು ರೋಟರಿ ಜಿಲ್ಲಾ ಗವರ್ನರ್ ಎಂ.ರಂಗನಾಥ್ ಭಟ್ ಅವರ ಭೇಟಿಯ ಸಂದರ್ಭದಲ್ಲಿ ಗವರ್ನರ್ ಅವರಿಂದಲೇ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ದಾನಿಗಳಾದ ಎ.ಕೆ.ಜಯರಾಮ ಶೇಕ ಮತ್ತು ಪದ್ಮಾವತಿ ಜೆ.ಶೇಕ ದಂಪತಿಗಳನ್ನು ಹಾಗೂ ನೂತನ ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಮ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಜ್ರನಾಭ ಶೆಟ್ಟಿ ಅರ್ಕುಳ ಬೀಡು ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ , ರೋಟರಿ ನಿಯೋಜಿತ ಗವರ್ನರ್ ಎನ್. ಪ್ರಕಾಶ್ ಕಾರಂತ , ಸಹಾಯಕ ಗವರ್ನರ್ ಯತಿಕುಮಾರ್ ಸ್ವಾಮಿ ಗೌಡ , ಫರಂಗಿಪೇಟೆ ರೋಟರಿ ಕ್ಲಬ್ ಅಧ್ಯಕ್ಷ ರಮೇಶ್ ತುಂಬೆ , ಡಾ.ಜಯಕುಮಾರ್ ಶೆಟ್ಟಿ ಅರ್ಕುಳ ಬೀಡು ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ದೇವದಾಸ್ ಕೆ.ಆರ್. ಸ್ವಾಗತಿಸಿದರು. ದಿನೇಶ್ ಶೆಟ್ಟಿ ಕೊಟ್ಟಿಂಜ ವಂದಿಸಿದರು. ಅಡ್ಯಾರ್ ಪುರುಷೋತ್ತಮ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.