ಕರಾವಳಿ

ಇಂದಿನಿಂದ ಮತ್ತೆ ಕೇರಳ ಗಡಿ ಬಂದ್ : ದ.ಕ. ಜಿಲ್ಲೆಗೆ ಆಗಮಿಸುವ ಕೇರಳದ ಪ್ರಯಾಣಿಕರಿಗೆ ಸೋಂಕು ಪರೀಕ್ಷೆ ಕಡ್ಡಾಯ

Pinterest LinkedIn Tumblr

ಮಂಗಳೂರು : ಕೇರಳದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ದ.ಕ. ಜಿಲ್ಲೆಗೆ ಕೇರಳದ ಪ್ರಯಾಣಿಕರ ಆಗಮನವನ್ನು ನಿರ್ಬಂಧಿಸಲಾಗಿದೆ.ಕಾಸರಗೋಡು ಹಾಗೂ ದ.ಕ. ಜಿಲ್ಲೆಯ ಗಡಿಗಳನ್ನು ಬಂದ್ ಮಾಡಲಾಗಿದೆ. ಕೇವಲ ಪ್ರಮುಖ ಐದು ಗಡಿಗಳನ್ನು ಹೊರತುಪಡಿಸಿ ಉಳಿದ ಗಡಿಗಳನ್ನು ಬಂದ್ ಮಾಡಲಾಗುತ್ತಿದೆ.

ಫೆ.22ರಿಂದ ಮಂಗಳೂರು ತಾಲೂಕಿನ ತಲಪಾಡಿ, ಬಂಟ್ವಾಳದ ಸಾರಡ್ಕ, ಪುತ್ತೂರಿನ ನೆಟ್ಟಣಿಗೆ ಮುಡ್ನೂರು, ಮೇಣಾಲ ಮತ್ತು ಸುಳ್ಯ ತಾಲೂಕಿನ ಜಾಲ್ಸೂರು ಮೂಲಕ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದ ಎಲ್ಲ ಗಡಿ ಸಂಚಾರವನ್ನು ಮುಂದಿನ ಆದೇಶದ ತನಕ ನಿರ್ಬಂಧಿಸಿರುವುದಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶದಲ್ಲಿ ತಿಳಿಸಿದ್ದಾರೆ.

ನೆರೆಯ ಕೇರಳ ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬರೂ 72 ಗಂಟೆಯೊಳಗೆ ನಡೆಸಲಾದ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಹೊಂದಿರುವುದು ಕಡ್ಡಾಯ. ಇದನ್ನು ಪರಿಶೀಲಿಸಿಯೇ ಜಿಲ್ಲೆ ಪ್ರವೇಶಿಸಲು ಅನುಮತಿಸಲಾಗುತ್ತದೆ. ಕ್ಯಾಟ್ ಪರೀಕ್ಷಾ ವರದಿಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸೂಚಿತ ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಕೋವಿಡ್ ನೆಗೆಟಿವ್ ವರದಿ ಇರುವುದನ್ನು ಖಚಿತ ಪಡಿಸಿಕೊಂಡು ದ.ಕ. ಜಿಲ್ಲೆಗೆ ಪ್ರವೇಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ. ಗಡಿ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಗಾಗಿ ವೈದ್ಯಕೀಯ ತಂಡ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದೆ. ಪ್ರಯಾಣಿಕರು ತಪಾಸಣಾ ಠಾಣೆಗಳಲ್ಲಿ ಹೆಸರು ದಾಖಲಿಸುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ದೈನಂದಿನ ಪ್ರಯಾಣಿಕರ ಮಾಹಿತಿಯನ್ನು ಪ್ರತ್ಯೇಕವಾಗಿ ಪಡೆಯಬೇಕು. ಪ್ರತಿದಿನ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ತಮ್ಮ ಗುರುತಿನ ಚೀಟಿಯನ್ನು ಹಾಗೂ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಚೆಕ್‌ಪೋಸ್ಟ್‌ನಲ್ಲಿ ಸಲ್ಲಿಸಬೇಕು. ಎಲ್ಲ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳು ಕೋವಿಡ್ ನೋಡಲ್ ಅಧಿಕಾರಿಯನ್ನು ಕಡ್ಡಾಯವಾಗಿ ನೇಮಕ ಮಾಡಬೇಕು. ಆಯಂಬುಲೆನ್ಸ್‌ಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

Comments are closed.