ಕರಾವಳಿ

ಸಹಕಾರಿ ಸಂಸ್ಥೆಗಳ ಅಧ್ಯಕ್ಷರು/ನಿರ್ದೇಶಕರು ಮತ್ತು ಸಿಬ್ಬಂದಿಗಳಿಗೆ ತರಬೇತಿಯ ಅನಿವಾರ್ಯತೆ ಇದೆ:ಬಿ. ಪ್ರವೀಣ್ ನಾಯಕ್

Pinterest LinkedIn Tumblr

ಮಂಗಳೂರು : ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ವತಿಯಿಂದ ದಕ್ಞಿಣ ಕನ್ನಡ ಜಿಲ್ಲೆಯ ಸೌಹಾರ್ದ ಸಹಕಾರಿಗಳಿಗಾಗಿ ಇತ್ತೀಚಿಗೆ ಮಂಗಳೂರಿನ ವಿಶ್ವಕರ್ಮ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ವಿಷಯಾಧರಿತ ತರಬೇತಿ ಕಾರ್ಯಕ್ರಮ ವನ್ನು ದ.ಕ ಜಿಲ್ಲೆಯ ಸಹಕಾರಿಗಳ ಉಪ ನಿಬಂಧಕರಾದ ಶ್ರೀ ಬಿ. ಪ್ರವೀಣ್ ನಾಯಕ್ ಇವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು. ಪ್ರಸ್ತುತ ಕಾಲಘಟ್ಟದಲ್ಲಿ ಅಗತ್ಯವಿರುವ ವಿಷಯಗಳನ್ನು ಜೋಡಿಸಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಕಾರಿ ಸಂಸ್ಥೆಗಳ ಅಧ್ಯಕ್ಷರು/ನಿರ್ದೇಶಕರು ಮತ್ತು ಸಿಬ್ಬಂದಿಗಳಿಗೆ ತರಬೇತಿಯ ಅನಿವಾರ್ಯತೆ ಇದೆ. ಈ ರೀತಿಯ ವಿಷಯಾಧರಿತ ತರಬೇತಿಯಿಂದ ಪ್ರಯೋಜನ ಪಡೆದು ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಕನ್ನಡ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಶ್ರೀ ಎ.ಸುರೇಶ್ ರೈ ಇವರು ಮಾತನಾಡಿ, ತರಬೇತಿ ಕಾರ್ಯಕ್ರಮದ ಮೂಲಕ ಸಹಕಾರಿ ಸಂಸ್ಥೆಯ ಪ್ರತಿನಿಧಿಗಳು ತಮ್ಮ ಅನುಭವವನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಈ ರೀತಿಯ ತರಬೇತಿ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು ಎಂದು ತಿಳಿಸಿದರು.

ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಶ್ರೀ ವಸಂತ ಅಡ್ಯಂತಾಯ, ಶ್ರೀ ಎಂ. ಅಶೋಕ್ ಶೇಟ್ ಮತ್ತು ಶ್ರೀ ನವೀನ್‌ಕುಮಾರ್ ಎಂ.ಎಸ್ ಇವರುಗಳು ಭಾಗವಹಿಸಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ದ.ಕ ಜಿಲ್ಲಾ ಸಂಯೋಜಕರಾದ ಶ್ರೀ ಗುರುಪ್ರಸಾದ್ ಬಂಗೇರ ಇವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಉಡುಪಿ ಜಿಲ್ಲಾ ಸಂಯೋಜಕರಾದ ಶ್ರೀ ವಿಜಯ್ ಬಿ.ಎಸ್., ಇವರು ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ನೆರವೇರಿಸಿದರು.

Comments are closed.