ಕರಾವಳಿ

ದ.ಕ, ಉಡುಪಿ ಜಿಲ್ಲೆಗೆ ಸ್ಥಳೀಯ ಕುಚ್ಚಲಕ್ಕಿಯನ್ನೇ ಪಡಿತರವಾಗಿ ನೀಡಲು ಸಿಎಂಗೆ ಮನವಿ ನೀಡಿದ ಕರಾವಳಿ‌ ಜನಪ್ರತಿನಿಧಿಗಳು..!

Pinterest LinkedIn Tumblr

ಬೆಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪಡಿತರದ ಮೂಲಕ ನೀಡುತ್ತಿರುವ ಅಕ್ಕಿಯ ಸಮಸ್ಯೆಯ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಸದ್ಯ ನೀಡುತ್ತಿರುವ ಕೊಚ್ಚಿಗೆ ಅಕ್ಕಿ ಅತ್ಯಂತ ಕಳಪೆ ಮಟ್ಟದ್ದಾಗಿದ್ದು ಜನಸಾಮಾನ್ಯರು ಅದರಲ್ಲೂ ಬಡವರು ಅಕ್ಕಿಯನ್ನು ಉಪಯೋಗಿಸಲಾರದೆ ಪಡಿತರವನ್ನು ಕಡಿಮೆ ದರಕ್ಕೆ ಮಾರಾಟ ಮಾಡಿ, ಹೆಚ್ಚು ದರದ ಅಕ್ಕಿಯನ್ನು ಪಡೆಯುತ್ತಿದ್ದಾರೆ. ಕೆಲವು ಕಡೆ ಪಡಿತರವನ್ನೇ ಪಡೆಯದೆ ಉಪಯೋಗವಿಲ್ಲದ ಹಾಗೆ ಬಿಡುತ್ತಾರೆ. ಇದರಿಂದಾಗಿ ಪಡಿತರದ ಮೂಲಕ ಪಡೆದುಕೊಂಡ ಕಳಪೆ ಗುಣಮಟ್ಟದ ಅಕ್ಕಿಯನ್ನು ಮಾರಾಟ ಮಾಡಿದ ಹಿನ್ನಲೆಯಲ್ಲಿ ಕ್ರಿಮಿನಲ್ ಕೇಸುಗಳು ದಾಖಲಾಗುತ್ತಿವೆ.

ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಬೇಕಾಗುವ ಅಕ್ಕಿಯನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿಯೇ ಬೆಳೆಯುವ ಕುಚ್ಚಲಕ್ಕಿಯನ್ನು ತೆಗೆದುಕೊಂಡು ಅಲ್ಲಿಯೇ ಪಡಿತರ ವಿತರಿಸಬೇಕೆಂದು ಅಥವಾ ದಕ್ಷಿಣ ಕನ್ನಡ ಜಿಲ್ಲೆಗೆ ಕುಚ್ಚಲಕ್ಕಿ ಸರಬರಾಜು ಮಾಡುವ ತನಕ ಪಡಿತರದ ಮೂಲಕ ನೀಡುವ ಅಕ್ಕಿಯ ಮೌಲ್ಯವನ್ನು ನೇರವಾಗಿ ಮಹಿಳೆಯರ ಖಾತೆಗೆ ಜಮಾ ಮಾಡಿ ಅವರಿಗೆ ಬೇಕಾದ ಅಕ್ಕಿಯನ್ನು ಅವರೇ ಖರೀದಿಸುವ ಸಲುವಾಗಿ ರಾಜ್ಯದಲ್ಲಿಯೇ ಮೊದಲಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೈಲೆಟ್ ಯೋಜನೆ ಕೈಗೆತ್ತಿಕೊಳ್ಳಬೇಕಾಗಿ ಕೋರಿದರು.

ಈ ಸಂದರ್ಭದಲ್ಲಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಅಂಗಾರ, ಶಾಸಕರಾದ ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಉಪಸ್ಥಿತರಿದ್ದರು.

Comments are closed.