ಕರಾವಳಿ

ಗುಲ್ವಾಡಿ ಗ್ರಾಮಪಂಚಾಯತ್ ನೂತನ ಅಧ್ಯಕ್ಷ ಸುಧೀಶ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಶೋಭಾ ಎಚ್. ಆಯ್ಕೆ

Pinterest LinkedIn Tumblr

ಕುಂದಾಪುರ: ಗುಲ್ವಾಡಿ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಹಾಗೂ ಸಿಪಿಐಎಂ ಒಮ್ಮತದ ಅಭ್ಯರ್ಥಿ ಸುಧೀಶ್ ಕುಮಾರ್ ಶೆಟ್ಟಿ‌ ಆಯ್ಕೆಯಾಗಿದ್ದು ಉಪಾಧ್ಯಕ್ಷರಾಗಿ‌ ಸಿಪಿಐಎಂ ಬೆಂಬಲಿತ ಶೋಭಾ ಎಚ್. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

13 ಸದಸ್ಯ ಬಲ ಹೊಂದಿರುವ ಗುಲ್ವಾಡಿ ಗ್ರಾಮಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ 5, ಕಾಂಗ್ರೆಸ್ ಹಾಗೂ ಸಿಪಿಐಎಂ ಬೆಂಬಲಿತ ತಲಾ ನಾಲ್ವರು ಸದಸ್ಯರು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಸುಧೀಶ್ ಶೆಟ್ಟಿಯವರಿಗೆ 7 ಮತ ಹಾಗೂ ಬಿಜೆಪಿ ಬೆಂಬಲಿತ ಸುರೇಂದ್ರ ಅವರಿಗೆ 6 ಮತ ಸಿಕ್ಕಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿ ಬಂದಿದ್ದು ಶೋಭಾ ಎಚ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ರಾಘವೇಂದ್ರ ನಾಯಕ್ ಚುನಾವಣಾಧಿಕಾರಿಯಾಗಿದ್ದರು. ಸಿಪಿಐಎಂ ಪಕ್ಷದ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕಾಂಗ್ರೆಸ್ ಮುಖಂಡರು ಈ ಸಂದರ್ಭ ಇದ್ದರು.

ಪಕ್ಷೇತರವಾಗಿ ಗೆದ್ದು ಕಾಂಗ್ರೆಸ್ ಸೇರ್ಪಡೆ…
ನೂತನ ಅಧ್ಯಕ್ಷ ಸುಧೀಶ್ ಕುಮಾರ್ ಶೆಟ್ಟಿ ಅವರು ಎರಡನೇ ಬಾರಿ ಗ್ರಾಮಪಂಚಾಯತ್ ಸದಸ್ಯಾರಾಗಿದ್ದಾರೆ. ಕಳೆದ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಸುಧೀಶ್ ಅವರು ಈ ಬಾರಿ ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದಿದ್ದರು. ರಾಜಕೀಯ ಬೆಳವಣಿಗೆಯೊಂದರಲ್ಲಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ‌ ಸೇರ್ಪಡೆಯಾಗುವ ಮೂಲಕ ಸಿಪಿಐಎಂ ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಒಮ್ಮತದ ಅಭ್ಯರ್ಥಿಯಾಗಿ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ ಗಾದಿ ಏರಿದ್ದಾರೆ. ಕಾಂಗ್ರೆಸ್ ಸೇರ್ಪಡೆ ವೇಳೆ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಮತ್ತು ವಂಡ್ಸೆ ಭಾಗದ ಯುವ ಕಾಂಗ್ರೆಸ್ ಮುಖಂಡ ಪ್ರಶಾಂತ್ ಪೂಜಾರಿ ಕರ್ಕಿ ಈ ಸಂದರ್ಭದಲ್ಲಿ ಗುಲ್ವಾಡಿ ಗ್ರಾಮೀಣ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.