ಕುಂದಾಪುರ: ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಶಿರೂರು ಬಳಿ 15 ವರ್ಷದ ಬಾಲಕನೊಬ್ಬ ಅತೀ ವೇಗದಿಂದ ಬೈಕ್ ಚಲಾಯಿಸಿಕೊಂಡು ಬಂದು ರಸ್ತೆಯ ಡಿವೈಡರ್ ಗೆ ಹೊಡೆದು ಅದರ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿರೂರು ಸಮೀಪದ ಅಳ್ವೆಗದ್ದೆ ಬಳಿ ನಡೆದಿದೆ.
ಬೈಕ್ ಸವಾರ ಅರಾನ್(15)ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ಹಡವಿನಕೋಣೆ ನಿವಾಸಿಯಾಗಿದ್ದಾನೆ.
ಕಳೆದ ವಾರವಷ್ಟೆ ಬೈಂದೂರು ಪೊಲೀಸರು ಈತ ಚಾಲನೆ ಪರವಾನಿಗೆ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ವೇಳೆ ಪತ್ತೆ ಹಚ್ಚಿ ದಂಡ ಕೂಡ ವಿಧಿಸಿದ್ದರು. ಅಲ್ಲದೆ ಬೈಕ್ ಸೀಜ್ ಮಾಡಿ ಎರಡು ದಿನ ಠಾಣೆಯಲ್ಲಿರಿಸಿಕೊಂಡಿದ್ದು ಆತನ ತಾಯಿಯನ್ನು ಬರಹೇಳಿ ಬುದ್ದಿ ಹೇಳಿ ಕಳುಹಿಸಿದ್ದರು.
ಆದರೆ ಗುರುವಾರ ಮುಂಜಾನೆ ಅತೀ ವೇಗದಿಂದ ಬೈಕ್ ಚಲಾಯಿಸಿ ಡಿವೈಡರ್ ಗೆ ಗುದ್ದಿದ ಅರಾನ್ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಬೈಂದೂರು ಠಾಣಾಧಿಕಾರಿ ಸಂಗೀತಾ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.