ಕರಾವಳಿ

ಸಹಕಾರಿ ರಂಗದ ಬೆಳವಣಿಗೆಗೆ ಸದಾ ನನ್ನ ಸಹಕಾರ ಇದೆ : ಎಸ್‌ಸಿಡಿಸಿಸಿ ಬ್ಯಾಂಕ್‌ನ ಸನ್ಮಾನ ಸ್ವೀಕರಿಸಿ ನೂತನ ಸಚಿವ ಎಸ್. ಅಂಗಾರ

Pinterest LinkedIn Tumblr

ಮಂಗಳೂರು: ಕರ್ನಾಟಕದ ಮೀನುಗಾರಿಕೆ ಹಾಗೂ ಬಂದರುಗಳು ಮತ್ತು ಒಳನಾಡು ಜಲಸಾರಿಗೆಯ ನೂತನ ಸಚಿವ ಅಂಗಾರ ಎಸ್. ಹಾಗು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ಅಭಿನಂದನಾ ಕಾರ್ಯಕ್ರಮ ಶನಿವಾರ ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಸಭಾಂಗಣದಲ್ಲಿ ಜರಗಿತು.

ಈ ವೇಳೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ನಬಾರ್ಡ್‌ನ ಮುಖ್ಯ ಮಹಾಪ್ರಬಂಧಕ ನೀರಜ್ ಕುಮಾರ್ ವರ್ಮ, ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಅವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಎಸ್. ಅಂಗಾರ, ‘ನಾನೊಬ್ಬ ಸಾಮಾನ್ಯ ಕೂಲಿ ಕಾರ್ಮಿಕ. ಜನರ ನಂಬಿಕೆಗೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸುತ್ತೇನೆ. ಸಂಘಟನೆ ಹಾಗೂ ಜನರ ಆಶೀರ್ವಾದದಿಂದ ಈ ಸ್ಥಾನ ಸಿಕ್ಕಿದೆ. ಸಹಕಾರಿ ರಂಗದ ಬೆಳವಣಿಗೆಗೆ ಸದಾ ಸಹಕಾರ ನೀಡುವುದಾಗಿ’ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ, ‘ಸಹಕಾರ ವ್ಯವಸ್ಥೆ ರಾಜ್ಯದಲ್ಲಿ ಗಟ್ಟಿಯಾಗಿದ್ದು, ಮಾಡಿರುವ ಕೆಲಸಗಳಿಂದಾಗಿ ಜಿಲ್ಲೆಯ ಹಲವು ಸಹಕಾರ ಧುರೀಣರು ಇಂದಿಗೂ ಕೂಡ ಅವಿಸ್ಮರಣೀಯವಾಗಿ ನೆನಪಿನಲ್ಲಿ ಉಳಿದುಕೊಂಡಿದ್ದಾರೆ. ಡಾ.ಅಂಬೇಡ್ಕರ್‌ ಅವರು ಬರೆದ ಸಂವಿಧಾನದ ಆಶಯಗಳಂತೆ ನಾವೆಲ್ಲರೂ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಬೇಕು’ ಎಂದು ಹೇಳಿದರು.

‘ಎಸ್‌ಸಿಡಿಸಿಸಿ ಬ್ಯಾಂಕ್ ದೇಶದ ಮಾದರಿ ಬ್ಯಾಂಕ್ ಆಗಿದೆ’ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು. ದೇಶದಲ್ಲಿ ಸಹಕಾರ ಕ್ಷೇತ್ರದ ವಿಶ್ವವಿದ್ಯಾಲಯದ ರೀತಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಸಾಧನೆ ಮಾಡಿದೆ. ಸಹಕಾರ ಸಂಘದ ಮಾದರಿಗಳನ್ನು ತಿಳಿಯಲು ರಾಜ್ಯ ಹಾಗೂ ದೇಶದ ವಿವಿಧೆಡೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುತ್ತಿದ್ದಾರೆ. ಬ್ಯಾಂಕ್‌ನ ಬೆಳವಣಿಗೆಯಲ್ಲಿ ಎಂ.ಎನ್.ರಾಜೇಂದ್ರ ಕುಮಾರ್ ಅವರ ಸಮರ್ಥ ನಾಯಕತ್ವ ಸದ್ದಿಲ್ಲದೇ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ‘ಎರಡು ಜಿಲ್ಲೆಗಳ ಸಹಕಾರಿಗಳ ಪರವಾಗಿ ಸಚಿವದ್ವಯರಿಗೆ ಗೌರವಾರ್ಪಣೆ ಸಲ್ಲಿಸಿದ್ದೇವೆ. ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಸಚಿವರ ಸಹಕಾರ ದೊರೆಯುವಂತಾಗಲಿ’ ಎಂದು ಹೇಳಿದರು.

ಸಾಮೂಹಿಕ ಪ್ರಯತ್ನದಿಂದಾಗಿ ಬ್ಯಾಂಕ್ 25 ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಈಗ ₹9,600 ಕೋಟಿ ವ್ಯವಹಾರ ನಡೆಸುತ್ತಿದೆ. ಶೇ 100 ರಷ್ಟು ಕೃಷಿ ಸಾಲ ಮರುಪಾವತಿಯಾಗುತ್ತಿದೆ. ಸಹಕಾರ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡುವುದರಿಂದ ಯಾವುದೇ ಮೋಸವಿಲ್ಲ ಎಂದು ಎಂ.ಎನ್.ಆರ್ ಹೇಳಿದರು.

ಕಾರ್ಯಕ್ರಮದಲ್ಲಿ ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ವೆಂಕಟ ಸ್ವಾಮಿ, ನಬಾರ್ಡ್ ಬ್ಯಾಂಕ್ ಡಿ.ಜಿ.ಎಂ ಸಂಗೀತಾ ಕರ್ತಾ, ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ.ಜಿ. ರಾಜಾರಾಮ್, ಭಾಸ್ಕರ ಎಸ್. ಕೋಟ್ಯಾನ್, ವಾದಿರಾಜ ಶೆಟ್ಟಿ, ಕೆ.ಎಸ್. ದೇವರಾಜ್, ಎಸ್.ರಾಜು ಪೂಜಾರಿ, ಶಶಿಕುಮಾರ್ ರೈ, ಎಸ್.ಬಿ.ಜಯರಾಮ ರೈ, ದೇವಿಪ್ರಸಾದ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಹರಿಶ್ಚಂದ್ರ, ಮಹೇಶ್ ಹೆಗ್ಡೆ, ಜೈರಾಜ್, ಅಶೋಕ್ ಕುಮಾರ್, ಸದಾಶಿವ ಉಳ್ಳಾಲ್, ರಾಜೇಶ್ ರಾವ್, ಸಹಕಾರಿ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್, ಚಿತ್ರದುರ್ಗ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಆರ್.ಗಿರೀಶ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್, ಎಸ್‌ಸಿಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ., ಮೀನುಗಾರಿಕಾ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಉಪಸ್ಥಿತರಿದ್ದರು.

ನಿರ್ದೇಶಕ ಶಶಿಕುಮಾರ್ ರೈ ಸ್ವಾಗತಿಸಿದರು. ಡಿಜಿಎಂ ಗೋಪಾಲಕೃಷ್ಣ ವಂದಿಸಿದರು. ಲಕ್ಷ್ಮಣ್ ಮಲ್ಲೂರು ನಿರೂಪಿಸಿದರು.

 

Comments are closed.