ಕರಾವಳಿ

ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ‌‌ ಡಿಸಿ‌ ಕಚೇರಿಯೆದುರು ಉಡುಪಿ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಧರಣಿ

Pinterest LinkedIn Tumblr

ಉಡುಪಿ: ಮಿಲಿಟರಿ ಕ್ಯಾಂಟಿನ್ ಸ್ಟೋರ್‌ಗಳ ಹೆಸರಿನಲ್ಲಿ ಹೊರ ರಾಜ್ಯಗಳಿಂದ ನಕಲಿ ಮದ್ಯ ಸರಬರಾಜು ಆಗುತ್ತಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ಮತ್ತು ಸನ್ನದುದಾರರಿಗೆ ತುಂಬಾ ನಷ್ಟ ಉಂಟಾಗುತ್ತಿದೆ ಎಂದು ಫೆಡರೇಶನ್ ಆಪ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಉಡುಪಿ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ ಬಿ.ಗೋವಿಂದರಾಜ್ ಹೆಗ್ಡೆ ಆರೋಪಿಸಿದ್ದಾರೆ.

ವಿವಿಧ ಬೇಡಿಕೆ ಈಡೇರಿಕೆ ಮತ್ತು ಮದ್ಯ ಮಾರಾಟಗಾರರ ಹಲವು ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಗ್ರಾಮೀಣ ಪ್ರದೇಶದಲ್ಲಿ ಬೀಡಾ ಅಂಗಡಿ, ಮಾಂಸಾಹಾರಿ ಹೊಟೇಲ್, ದಿನಸಿ ಅಂಗಡಿ, ಡಾಬಾಗಳಲ್ಲಿನ ನಕಲಿ ಮದ್ಯ ಮಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಪ್ರತಿ ಜಿಲ್ಲೆಯಲ್ಲಿ ಈ ಬಗ್ಗೆ ಮತ್ತು ಗಾಂಜಾ ಹಾಗೂ ಡ್ರಗ್ಸ್ ಕುರಿತು ವಿಶೇಷ ತಂಡವನ್ನು ರಚಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಅಬಕಾರಿ ಅಧಿಕಾರಿಗಳು ಲಂಚ- ಮಾಮೂಲಿ ವಸೂಲಿಗಾಗಿ ನೀಡುತ್ತಿರುವ ತೊಂದರೆ ಮತ್ತು ಅಬಕಾರಿ ಅಧಿಕಾರಿಗಳ ಬೇನಾಮಿ ಆಸ್ತಿ ಗಳ ಬಗ್ಗೆ ನ್ಯಾಯಾಧೀಶರಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಆನ್‌ಲೈನ್ ಮೂಲಕ ಮದ್ಯ ಮಾರಾಟ ಮಾಡುವ ಪ್ರಸ್ತಾವವನ್ನು ಕೈಬಿಡ ಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಸಿ.ಎಲ್-6ಎ ಮತ್ತು 7 ಸನ್ನದುಗಳನ್ನು ಪ್ರಾರಂಭಿ ಸಲು ನೀಡಿರುವ ಆದೇಶವನ್ನು ರದ್ದುಗೊಳಿಸಿ, 2018ರ ನಂತರ ನೀಡಿರುವ ಸಿ.ಎಲ್-7 ಸನ್ನದುಗಳನ್ನು ವಿಶೇಷವಾಗಿ ಮರು ತನಿಖೆ ಮಾಡಲು ಸಮಿತಿ ಯನ್ನು ರಚಿಸಬೇಕು. ಈ ಸಮಿತಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಿಗೆ ಸದಸ್ಯತ್ವ ನೀಡಬೇಕು ಎಂದು ಅವರು ಒತ್ತಾಯಿಸಿದರು. ಕೋಟಾ ನಿಗದಿ ಮಾಡದೆ ನೀಡಿರುವ ಎಂ.ಎಸ್.ಐ.ಎಲ್. ಅಂಗಡಿಗಳನ್ನು ಸ್ಥಗಿತಗೊಳಿಸಬೇಕು. ಕೋವಿಡ್ ಲಾಕ್‌ಡೌನ್‌ನಿಂದ ನಷ್ಟದಲ್ಲಿರುವ ಉದ್ಯಮ ವಲಯಕ್ಕೆ ಪರಿಹಾರ ಘೋಷಿಸಬೇಕು. ಹೆಚ್ಚಳ ಮಾಡಿರುವ ಅಬಕಾರಿ ಶುಲ್ಕವನ್ನು ಕೈಬಿಡಬೇಕು. ಚಿಲ್ಲರೆ ಮದ್ಯ ಮಾರಾಟಗಾರರಿಗೆ ಲಾಭಾಂಶವನ್ನು ಶೇ.20 ನೀಡಬೇಕು. ಎಲ್ಲಾ ವಲಯದ ಸನ್ನದುಗಳಿಗೆ ಏಕರೂಪದ ಸನ್ನದು ಶುಲ್ಕ ವಿಧಿಸಬೇಕು ಎಂದರು. ಬಜೆಟ್‌ಗೆ ಮೊದಲು ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿಗಳು ಕೂಡಲೇ ಸಭೆ ಕರೆಯಬೇಕು. ಇಲ್ಲದಿದ್ದರೆ ಬಜೆಟ್ ಅಧಿವೇಶನದ ಸಂದರ್ಭ ನಡೆಸಲು ಉದ್ದೇಶಿಸಿರುವ ಬೃಹತ್ ಪ್ರತಿಭಟನೆಯಲ್ಲಿ ಮುಂದಿನ ಹೋರಾಟ ಹೆಜ್ಜೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದರು. ಬಳಿಕ ಈ ಕುರಿತ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಫೆಡರೇಶನ್ ರಾಜ್ಯ ಸಮಿತಿ ಸದಸ್ಯ ಮನೋಹರ್ ಶೆಟ್ಟಿ, ಉಡುಪಿ ತಾಲೂಕು ಅಧ್ಯಕ್ಷ ಮಿಥುನ್ ಆರ್. ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ಜನಾರ್ದನ ಪೂಜಾರಿ, ಕಾರ್ಕಳ ತಾಲೂಕು ಅಧ್ಯಕ್ಷ ಶೋದರ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

 

Comments are closed.