ಕರ್ನಾಟಕ

ಅಕ್ರಮ ಆಸ್ತಿ ಸಂಪಾದನೆ ಮಾಡಿದ ಅಧಿಕಾರಿಗಳ ಮೇಲೆ ದಾಳಿ; ರಾಜ್ಯದ 30 ಕಡೆ ಪರಿಶೀಲನೆ

Pinterest LinkedIn Tumblr

ಬೆಂಗಳೂರು: ಆದಾಯಕ್ಕೂ ಮೀರಿ ಅಧಿಕ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಅರೋಪದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಆಧಿಕಾರಿಗಳ ಮನೆ ಮತ್ತು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಏಳು‌ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ 30 ಕಡೆ ಎಸಿಬಿ ರೇಡ್​ ನಡೆದಿದೆ. ಬೆಂಗಳೂರು ನಗರ, ಬಳ್ಳಾರಿ, ಕೋಲಾರ, ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಕಲಬುರಗಿಯ ವಿವಿಧೆಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಸಹಕಾರ ಸಂಘಗಳ ಜಂಟಿ ನಿಂಬಂಧಕ ಡಿ. ಪಾಂಡುರಂಗ ಗರಗ್ ಅವರಿಗೆ ಸಂಬಂಧಿಸಿದ ವಿಜಯನಗರದ ಮನೆ, ಜಯನಗರ, ಮಲ್ಲೇಶ್ವರಂ ಕಚೇರಿ ಹಾಗೂ ಚಿತ್ರದುರ್ಗದ ಮನೆ ಸೇರಿ ಐದು ಕಡೆ ದಾಳಿ ನಡೆದಿದೆ .

ಹುಬ್ಬಳ್ಳಿಯ ಸಣ್ಣ ನೀರಾವರಿ ಇಲಾಖೆ ಇಇ ದೇವರಾಜ್ ಶಿಗ್ಗಾಂವಿ ಎಂಬವರ ಮನೆಗಳ ಮೇಲೆ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹುಬ್ಬಳ್ಳಿ ಗೋಕುಲ ರಸ್ತೆ, ವಿದ್ಯಾನಗರ, ಕೋಟಿಲಿಂಗೆಶ್ವರ ನಗರದ ಮನೆಗಳಲ್ಲಿ ಮೂರು ಎಸಿಬಿ ತಂಡಗಳು ಪರಿಶೀಲನೆ ನಡೆಸುತ್ತಿವೆ. ಮಾವನ ಬೆಂಗೇರಿ ಬಳಿಯ ಬಾಲಾಜಿ ನಗರದ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ, ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.

ಚಿತ್ರದುರ್ಗದಲ್ಲಿ ಧಾರವಾಡ ಅರಣ್ಯ ಇಲಾಖೆಯ ಅಧಿಕಾರಿ ಶ್ರೀನಿವಾಸ್​​ ಎಂಬುವವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಶ್ರೀನಿವಾಸ್ ​ಧಾರವಾಡ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಸೇರಿದ ವಿದ್ಯಾನಗರದ ಮನೆ ಹಾಗೂ‌ ಬಸವೇಶ್ವರ ಮೆಡಿಕಲ್​​‌ ಕಾಲೇಜು ಬಳಿಯ ಮನೆ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ ಚಿತ್ರದುರ್ಗ ತಾಲೂಕಿನ ಮಾರಘಟ್ಟ ಗ್ರಾಮದ‌ ಬಳಿಯ ತೋಟದ ಮನೆ ಮೇಲೂ‌ ದಾಳಿ ನಡೆಸಲಾಗಿದೆ.

ಕೋಲಾರದಲ್ಲಿ ಡಿಹೆಚ್​ಓ ಡಾ. ವಿಜಯ್​ ಕುಮಾರ್ ಅವರ ಮನೆ ಕಚೇರಿ ಸೇರಿ ಒಟ್ಟು 6 ಕಡೆ ಏಕಕಾಲಕ್ಕೆ ದಾಳಿ ನಡೆದಿದೆ. ಡಾ.ವಿಜಯ್ ಕುಮಾರ್ ಅವರ ಮನೆ, ಕಚೇರಿ, ಮುಳಬಾಗಿಲಿನಲ್ಲಿರುವ ಮನೆ ಹಾಗೂ ಅವರ ಖಾಸಗಿ ಆಸ್ಪತ್ರೆ ಮೇಲೆ ಎಸಿಬಿ ಅಧಿಕಾರಿಗಳು ರೇಡ್​ ಮಾಡಿದ್ದಾರೆ.

ಜೊತೆಗೆ ಚಿಂತಾಮಣಿಯಲ್ಲಿರುವ ಮನೆ ಹಾಗೂ ಬೆಂಗಳೂರಿನ ಫ್ಲಾಟ್ ಸೇರಿ ಒಟ್ಟು ಆರು ಕಡೆ ಏಕಕಾಲದಲ್ಲಿ ಎಸಿಬಿ ಡಿವೈಎಸ್​ಪಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಡಾ.ವಿಜಯ್ ಕುಮಾರ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೇಳಿಬಂದ ಹಿನ್ನೆಲೆ ಎಸಿಬಿ ರೇಡ್ ನಡೆದಿದೆ ಎನ್ನಲಾಗಿದೆ.

Comments are closed.