ಕರಾವಳಿ

ನೇತಾಜಿ ಜನ್ಮ ದಿನಾಚರಣೆ : ಸಾಧಕರಿಗೆ ನೇತಾಜಿ ಪುರಸ್ಕಾರ – ಪ್ರತಿಭಾ ಪುರಸ್ಕಾರ – ಪ್ರೋತ್ಸಾಹಧನ ವಿತರಣೆ

Pinterest LinkedIn Tumblr

ಮುದ್ರಾಡಿ ಸಿರಿಬೀಡು ದಿವಾಕರ ಶೆಟ್ಟಿ ಅವರಿಂದ ನಾಡಿಗೆ ದೊಡ್ಡ ಕೊಡುಗೆ : ಡಾ.ಸಿಪ್ರೀಯನ್‌ ಮೊಂತೇರೋ 

ಮುದ್ರಾಡಿ : ಶಿಕ್ಷಣ ಇಲಾಖೆಗೆ, ಬಡವರ ಶಿಕ್ಷಣಕ್ಕೆ, ನಾಡಿಗೆ ಯಾವೂದೇ ಫಲಾಫೇಕ್ಷೆ ಇಲ್ಲದೆ ಅನ್ನ ಅಕ್ಷರ ಆರೋಗ್ಯದ ಸೇವೆ ನೀಡುತ್ತಿರುವ ಮುಂಬೈ ಉದ್ಯಮಿ ಮುದ್ರಾಡಿ ಸಿರಿಬೀಡು ದಿವಾಕರ ಎನ್‌ ಶೆಟ್ಟಿ ಅವರ ಕೊಡುಗೆ ಸ್ಮರಣೀಯ ಮತ್ತು ಅನುಕರಣೀಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಸಿಪ್ರೀಯನ್‌ ಮೊಂತೇರೋ ಮೆಚ್ಚುಗೆ ವ್ಯಕ್ತಪಡಿಸಿದರು.

ಅವರು ಮುದ್ರಾಡಿ ಎಂಎನ್‌ಡಿಎಸ್‌ಎಂ ಅನುದಾನಿತ ಪ್ರೌಢಶಾಲೆಯಲ್ಲಿ ಮುದ್ರಾಡಿ ವಿದ್ಯಾಸಾಗರ ಎಜ್ಯುಕೇಶನ್‌ ಟ್ರಸ್ಟ್‌ ವತಿಯಿಂದ ಶನಿವಾರ ನಡೆದ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ 125ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಶಾಲೆ ಮತ್ತು ಕನ್ನಡ ಮಾಧ್ಯಮವನ್ನು ಉಳಿಸಿ ಬೆಳೆಸುವುದು ಈಗ ಅತ್ಯಂತ ಸವಾಲಿನ ಕೆಲಸ, ಅಂತಹ ಮಹತ್ವದ ಕೆಲಸವನ್ನು ಗುಣಮಟ್ಟದ ಶಿಕ್ಷಣವನ್ನು ಕೊಡಿಸುವ ಮೂಲಕ ದಿವಾಕರ ಶೆಟ್ಟಿಯವರು ನಿರಂತರವಾಗಿ ಮಾಡುತ್ತ ಬಂದಿದ್ದಾರೆ. ಅವರೊಬ್ಬ ಅಪರೂಪದ ವ್ಯಕ್ತಿತ್ವ, ಸಾಧನೆಗೆ ಮಾಧ್ಯಮಗಳು ಅಡ್ಡಿ ಅಲ್ಲ ಎಂಬುದನ್ನು ಕೂಡ ಮುದ್ರಾಡಿ ಪ್ರೌಢಶಾಲೆಯ ಮಕ್ಕಳು ಸಾಧಿಸಿ ತೋರಿಸಿದ್ದಾರೆ.

ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಅಂದಿನ ತ್ಯಾಗದ ಫಲವೇ ಇಂದು ನಾವು ರಾಜಕೀಯ ಸ್ವಾತಂತ್ರ್ಯದ ಮೂಲಕ ಚೆನ್ನಾಗಿ ಬದುಕಲು ಸಾಧ್ಯವಾಗುತ್ತಿದೆ ಎಂದು ಡಾ.ಸಿಪ್ರೀಯನ್‌ ಮೊಂತೇರೋ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುದ್ರಾಡಿ ವಿದ್ಯಾಸಾಗರ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷರಾದ ಮುಂಬೈ ಉದ್ಯಮಿ ಮುದ್ರಾಡಿ ಸಿರಿಬೀಡು ದಿವಾಕರ ಎನ್‌ ಶೆಟ್ಟಿ ಅವರು ಮಹಾತ್ಮ ಗಾಂಧಿಜೀ ಅವರ ಶಾಂತಿ ಮತ್ತು ನೇತಾಜಿಯವರ ಕ್ರಾಂತಿಯ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮೂರು ಮುದ್ರಾಡಿಯ ಐವರು ಹೋರಾಡಿದ ಸವಿನೆನಪಿಗಾಗಿ ನೇತಾಜಿಯವರ ಪುತ್ಥಳಿಯನ್ನು ಮುದ್ರಾಡಿಯಲ್ಲಿ ಸ್ಥಾಪಿಸಲು ನನಗೆ ಪ್ರೇರಣೆ ಸಿಕ್ಕಿದೆ ಎಂದರು.

ಬಡ ವಿದ್ಯಾರ್ಥಿಗಳಿಗೆ ನೆರವು, ವಿಕಲ ಚೇತನರ ಸೇವೆ, ಆರೋಗ್ಯ ಸೇವೆಯನ್ನು ನೇತಾಜಿ ಕ್ರಾಂತಿಕಾರಿ ಸಂಘದ ಮೂಲಕ ನಿರಂತರವಾಗಿ ಮಾಡುತ್ತ ಬಂದಿದ್ದೇವೆ. ಅನ್ನ ಆರೋಗ್ಯ ಮತ್ತು ಶಿಕ್ಷಣದ ಸೇವೆಯನ್ನು ಮುಂದೆಯೂ ಮಾಡುತ್ತೇವೆ. ಮುದ್ರಾಡಿಯ ಬಡ ಮಕ್ಕಳು ಶಿಕ್ಷಣದಿಂದ ಎಂದೂ ವಂಚಿತರಾಗಬಾರದು ಎಂಬ ಕಲ್ಪನೆಯಲ್ಲಿ ಮಕ್ಕಳಿಗೆ ಪ್ರೇರಣೆ ನೀಡಲು ಸಾಕಷ್ಟು ಮಂದಿಗೆ ಪ್ರೋತ್ಸಾಹಧನ ನೀಡಲಾಗಿದೆ. ಮುಂದೇಯೂ ಪ್ರೋತ್ಸಾಹ ನೀಡಲು ತಿರ್ಮಾನಿಸಲಾಗುತ್ತದೆ.

ಮುದ್ರಾಡಿಯ ಎಲ್ಲರೂ ಶಿಕ್ಷಣದಲ್ಲಿ ಮುಂದೆ ಬಂದು ಉದ್ಯೋಗವಂತರಾಗಿ ಸಮಾಜದ ಆಸ್ತಿಯಾಗಿ ಬೆಳೆಯುವಂತೆ ದಿವಾಕರ ಶೆಟ್ಟಿಯವರು ಆಶಿಸಿದರು. ಅಪರೂಪದ ಸಮಾಜ ಸೇವಕರಾದ ಮುದ್ರಾಡಿ ದಿವಾಕರ ಶೆಟ್ಟಿ ಅವರ ಸೇವೆ ಮತ್ತು ಮುದ್ರಾಡಿ ಪ್ರೌಢಶಾಲೆಯ ಗುಣಮಟ್ಟದ ಶಿಕ್ಷಣ ರಾಜ್ಯಕ್ಕೆ ಮಾದರಿ ಎಂದು ಹೆಬ್ರಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ್‌ ಕುಮಾರ್‌ ಶಿವಪುರ ಅಭಿನಂದಿಸಿದರು.

ಮುದ್ರಾಡಿಯ ಪೇಟೆಯಲ್ಲಿರುವ ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. 2019ನೇ ಸಾಲಿನಲ್ಲಿ ಮುದ್ರಾಡಿ ಪ್ರೌಢಶಾಲೆಯಲ್ಲಿ ೮ನೇ ತರಗತಿಗೆ ಸೇರಿದ 30 ವಿದ್ಯಾರ್ಥಿಗಳಿಗೆ, 2018-೧೯ನೇ ಸಾಲಿನ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಮತ್ತು ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ಮುದ್ರಾಡಿ ಮತ್ತು ಹೆಬ್ರಿಯ ಇಂದಿರಾನಗರ ಶಾಲೆಯ ಗೌರವ ಶಿಕ್ಷಕರಿಗೆ ಗೌರವ ಸಂಭಾವನೆ ನೀಡಲಾಯಿತು.

ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮುದ್ರಾಡಿ ಮಾದರಿ ಶಾಲೆಯ ಶ್ರೀನಿವಾಸ ಭಂಡಾರಿ, ಮುದ್ರಾಡಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ಪಿ.ವಿ.ಆನಂದ್‌ ಸಾಲಿಗ್ರಾಮ, ನಿವೃತ್ತ ಮುಖ್ಯ ಶಿಕ್ಷಕ ಅಂಡಾರು ಚಂದ್ರಕಾಂತ್‌, ಮುದ್ರಾಡಿ ಪ್ರೌಢಶಾಲೆಯ ಹಳೇ ವಿದ್ಯಾರ್ಥಿಯಾಗಿರುವ ಯುವ ಸಾಹಿತಿ ಚೈತ್ರ ಕಬ್ಬಿನಾಲೆ, ಹೆಬ್ರಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ್‌ ಕುಮಾರ್‌ ಶಿವಪುರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಸಿಪ್ರೀಯನ್‌ ಮೊಂತೇರೋ ಸಹಿತ ಹಲವರನ್ನು ನೇತಾಜಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ವರಂಗದ ವೃಷಭದೇವ ಅಧಿಕಾರಿ, ಪ್ರೌಢಶಾಲಾ ಶಿಕ್ಷಕರು, ಸ್ಥಳೀಯ ಗಣ್ಯರು,ಮುದ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಸನತ್‌ ಕುಮಾರ್‌ ಮುದ್ರಾಡಿ ಭಾಗವಹಿಸಿದ್ದರು.

ಸಾಧಕ ವಿದ್ಯಾರ್ಥಿಗಳಾದ ಶ್ರೇಯಾ, ಧಶವಂತ್‌, ವಾಸುದೇವ್‌ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು. ಶಿಕ್ಷಕಿ ಶ್ಯಾಮಲ ಕೊಠಾರಿ ನಿರೂಪಿಸಿ ಮುಖ್ಯ ಶಿಕ್ಷಕಿ ಇಂದಿರಾ ಬಾಯರಿ ಸ್ವಾಗತಿಸಿ ಶಿಕ್ಷಕ ಪಿ.ವಿ.ಆನಂದ್‌ ಸಾಲಿಗ್ರಾಮ ವಂದಿಸಿದರು.

Comments are closed.