ಕರಾವಳಿ

ಕುಂದಾಪುರ ಕೋಡಿ ಲೈಟ್ ಹೌಸ್ ಬಳಿ ಕಡಲ ತೀರದಲ್ಲಿ ಮತ್ತೆ ಕಡಲಾಮೆ ಮೊಟ್ಟೆಗಳು ಪತ್ತೆ..!

Pinterest LinkedIn Tumblr

ಕುಂದಾಪುರ: ಇಲ್ಲಿಗೆ ಸಮೀಪದ ಕೋಡಿಯ ಲೈಟ್ ಹೌಸ್‌ ಬಳಿಯ ಅರಬ್ಬಿ ಕಡಲ ತೀರದಲ್ಲಿ ಶುಕ್ರವಾರ 100 ಕ್ಕೂ ಅಧಿಕ ಕಡಲಾಮೆ ಮೊಟ್ಟೆಗಳು ಪತ್ತೆಯಾದ ಬೆನ್ನಲ್ಲೇ ಮತ್ತೆ ಭಾನುವಾರ ಬೆಳಿಗ್ಗೆ 100 ಕ್ಕೂ ಅಧಿಕ ಮೊಟ್ಟೆಗಳು ಪತ್ತೆಯಾಗಿದೆ.

ಶುಕ್ರವಾರ ಕಡಲಾಮೆ ಮೊಟ್ಟೆಗಳನ್ನು ಕಂಡಿದ್ದ ಸ್ಥಳೀಯರಾದ ಬಾಬು ಮೊಗವೀರ ಅವರಿಗೆ ಭಾನುವಾರ ಕಡಲ ತೀರದಲ್ಲಿ ಕಡಲಾಮೆಯ ಮೊಟ್ಟೆಗಳು ಕಣ್ಣಿಗೆ ಬಿದ್ದಿದೆ. ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಎಫ್‌ಎಸ್‌ಎಲ್‌ ಇಂಡಿಯಾ ಸಂಸ್ಥೆಯ ಕಾರ್ಯಕರ್ತರು ಹಾಗೂ ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಮೊಟ್ಟೆಗಳ ರಕ್ಷಣೆ ಮಾಡಿದ್ದಾರೆ.

ಶುಕ್ರವಾರ ಪತ್ತೆಯಾದ ಸ್ಥಳದಿಂದ ಅಂದಾಜು 100 ಮೀಟರ್‌ ಅಂತರದಲ್ಲಿ ಭಾನುವಾರ ಮೊಟ್ಟೆಗಳು ಪತ್ತೆಯಾಗಿದೆ. ಕಡಲಾಮೆಗಳ ಹೆಜ್ಜೆ ಜಾಡನ್ನು ಪತ್ತೆ ಹಚ್ಚುವಲ್ಲಿ ನಿಪುಣರಾದ ಬಾಬು ಮೊಗವೀರ ಅವರಿಗೆ ಭಾನುವಾರ ಬೆಳಿಗ್ಗೆ ಕಡಲ ತೀರದ ಮರಳ ಮೇಲೆ ಆಮೆಗಳ ಹೆಜ್ಜೆ ಗುರುತು ಕಂಡಿದೆ. ಇದರ ಜಾಡು ಹಿಡಿದು ಹುಡುಕಾಟ ನಡೆಸಿದಾಗ ಮೊಟ್ಟೆಗಳು ಪತ್ತೆಯಾಗಿದೆ. ಇಂದು ದೊರೆಕಿರುವ ಮೊಟ್ಟೆಗಳಿಗೂ ಕಡಲ ತೀರದಲ್ಲಿಯೇ ಹ್ಯಾಚರಿ ನಿರ್ಮಿಸಿ ಸ್ಥಳೀಯರ ಸಹಕಾರದಲ್ಲಿ ಸಂರಕ್ಷಣೆ ಕಾರ್ಯ ಕೈಗೊಳ್ಳಲಾಗಿದೆ.

ಉಡುಪಿ ಸಿಆರ್ ಝಡ್ ಅಧಿಕಾರಿ ಸವಿತಾ ಖಾದ್ರಿ, ವಲಯಾರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಮಾಲತಿ, ಆನಂದ ಬಳೆಗಾರ, ಎಫ್‌ಎಸ್‌ಎಲ್‌ ಇಂಡಿಯಾ ಸಂಸ್ಥೆಯ ಸಂಯೋಜಕರಾದ ದಿನೇಶ್‌ ಸಾರಂಗ, ವೆಂಕಟೇಶ್‌ ಶೇರುಗಾರ್, ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಭರತ್‌ ಬಂಗೇರಾ, ಪುಂಡಲೀಕ ಬಂಗೇರಾ, ಸಂದೀಪ್‌ ಕೋಡಿ, ಶಶಿ, ಆರುಣ್, ಕಲ್ಪನಾ ಪೂಜಾರಿ,ದೀಪಾ, ಆಶಾ ಶೆಟ್ಟಿ, ನಾಗರಾಜ್‌, ಸಂತೋಷ್‌ ಕೋಡಿ, ಅಕ್ಷಯ್, ವೈಭವ, ಭರತ್‌ ಖಾರ್ವಿ, ಉದಯ ಖಾರ್ವಿ, ಅನಿಲ್‌ ಖಾರ್ವಿ, ದಿನೇಶ್‌ ಪೂಜಾರಿ, ಸಚಿನ್‌ ಪೂಜಾರಿ, ಲಕ್ಷಣ ಪೂಜಾರಿ, ರಾಘವೇಂದ್ರ ಪೂಜಾರಿ, ಸಂಪತ್‌, ಸಚಿನ್‌ ಕೋಡಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ಕುಂದಾಪುರ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ಹಸ್ತಾ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Comments are closed.