ಕರಾವಳಿ

ಕಾಣಿಕೆಯ ಹುಂಡಿಯಲ್ಲಿ ಶಿಲುಬೆ ಹಾರ ಮತ್ತು ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

Pinterest LinkedIn Tumblr

ಮಂಗಳೂರು : ಮಂಗಳೂರಿನ ಉಲ್ಲಾಳದ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆಯ ಹುಂಡಿಯಲ್ಲಿ ಶಿಲುಬೆ ಹಾರ ಮತ್ತು ಕಾಂಡೋಮ್ ಹಾಕಿ ಅಪವಿತ್ರ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸ ಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

ದಿನಾಂಕ 20.1.2021 ರಂದು ಮಂಗಳೂರಿನ ಉಲ್ಲಾಳದ ಕೊರಗಜ್ಜ ಮತ್ತು ಗುಳಿಗಜ್ಜನ ಕಟ್ಟೆಯ ಕಾಣಿಕೆಯ ಹುಂಡಿಯಲ್ಲಿ ಶಿಲುಬೆ ಹಾರ ಮತ್ತು ಕಾಂಡೋಮ್ ಹಾಕಿ ಅಪವಿತ್ರ ಮಾಡಿದ ಘಟನೆಯು ನಡೆದಿದೆ. ಇದರಲ್ಲಿ ಫ್ಲೆಕ್ಸ್ ಹಾಕಲಾಗಿದ್ದು, ಅದರಲ್ಲಿ ಭಾಜಪ ನಾಯಕರುಗಳ ಚಿತ್ರಗಳನ್ನು ಗೀಚಿ ವಿರೂಪಗೊಳಿಸಿ ಅವರನ್ನು ಕೊಲ್ಲಬೇಕು ಎಂಬ ಪ್ರಚೋದನಕಾರಿ ಬರಹ ಬರೆಯಲಾಗಿದೆ. ಹಿಂದೂ ದೇವತೆಗಳ ಅಪಮಾನ ಮಾಡುವ ಬರಹ ಬರೆಯಲಾಗಿತ್ತು.

ಕಳೆದ ವಾರ ಜನವರಿ 2 ರಂದು ಬಬ್ಬು ಸ್ವಾಮಿ ದೇವಸ್ಥಾನದ ಕಾಣಿಕೆಯ ಡಬ್ಬಿಯಲ್ಲಿ ಸಹ ಏಸು ಕ್ರಿಸ್ತನ ಬರಹ ಇರುವ ನಕಲಿ ನೋಟ್ ಸಹಿತ, ಕಾಂಡೋಮ್ ಹಾಕಿ ವಿಕೃತಿ ಮೆರೆಯಲಾಗಿತ್ತು. ಅದೇ ರೀತಿ ಕಟಪಾಡಿಯ ಪೇಟಾಬೆಟ್ಟು ಶ್ರೀ ಬಬ್ಬುಸ್ವಾಮಿ ದೇವಸ್ಥಾನದ ಕೊರಗಜ್ಜನ ದೇವಸ್ಥಾನದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ವಿಕೃತಿ ಮೆರೆಯಲಾಗಿತ್ತು. ನವೆಂಬರ್ 2020 ರಂದು ಹಾಸನದಲ್ಲಿ ಹೊಯ್ಸಳ ಕಾಲದ 12 ನೇ ಶತಮಾನದ ಕಾಳಿ ಮಾತೆಯ ಮುರ್ತಿಯನ್ನು ಭಗ್ನ ಮಾಡಲಾಗಿತ್ತು.

ಒಟ್ಟಾರೆ ಈ ರೀತಿಯಲ್ಲಿ ಆಂಧ್ರಪ್ರದೇಶದಲ್ಲಿ ನಡೆದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ, ವಿಶೇಷವಾಗಿ ಮಂಗಳೂರಿನ ಸುತ್ತಮುತ್ತ ಹಿಂದೂ ದೇವಸ್ಥಾನಗಳನ್ನು ಭಗ್ನ ಮಾಡುವ, ದೇವಸ್ಥಾನ ಅಪವಿತ್ರ ಮಾಡುವ ಮತ್ತು ಪ್ರಚೋದನಕಾರಿ ಬರಹ ಹಾಕುವ ವಿಕೃತ ಕೃತ್ಯಗಳು ಹೆಚ್ಚಾಗುತ್ತಿದೆ.

ಕೆಲವು ವರ್ಷಗಳ ಹಿಂದೆ ಚರ್ಚುಗಳ ವಿಷಯದ ಬಗ್ಗೆ ಬೊಬ್ಬೆ ಹಾಕುವವರು ಮಾತ್ರ, ಈಗ ದೇವಸ್ಥಾನ ಮೇಲೆ ಆಕ್ರಮಣ ಆದಾಗ ಮೌನವಾಗಿರುವುದು ಆಘಾತಕಾರಿಯಾಗಿದೆ. ಇದೆಲ್ಲವನ್ನೂ ಗಮನಿಸಿದಾಗ ಇದೊಂದು ಹಿಂದೂ ದೇವಸ್ಥಾನಗಳನ್ನು ಅಪವಿತ್ರ ಮಾಡುವ ವ್ಯವಸ್ಥಿತ ಷಡ್ಯಂತ್ರದ ರೀತಿಯಲ್ಲಿ ನಡೆಯುತ್ತಿದೆ. ಇದರ ಹಿಂದೆ ಕೆಲವು ಸಮಾಜ ಘಾತಕ ಶಕ್ತಿಗಳು, ಮತಾಂಧ ಶಕ್ತಿಗಳು ಕೆಲಸ ಮಾಡುತ್ತಿರುವುದು ಗಮನಕ್ಕೆ ಬರುತ್ತದೆ.

ಅದಕ್ಕಾಗಿ ರಾಜ್ಯ ಸರ್ಕಾರವು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಕೃತ್ಯ ಮಾಡುವ ಅಪರಾಧಿಗಳನ್ನು ಕೂಡಲೇ ಬಂಧಿಸಿ ಅವರಿಗೆ ರಾಷ್ಟ್ರೀಯ ಸುರಕ್ಷಾ ಕಾಯಿದೆಯನ್ನು ಹಾಕಬೇಕು. ಇದಕ್ಕಾಗಿ ಪ್ರತ್ಯೇಕ ತನಿಖಾ ಸಂಸ್ಥೆಯನ್ನು ನೇಮಕ ಮಾಡಬೇಕು. ಅಲ್ಲದೇ ಹಿಂದೂ ದೇವಸ್ಥಾನಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ಶ್ರೀ ಚಂದ್ರ ಮೊಗೇರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.