ಕರ್ನಾಟಕ

ಶಿವಮೊಗ್ಗ ಜಿಲೆಟಿನ್ ಸ್ಪೋಟ ಪ್ರಕರಣ; ಮೂವರ ಬಂಧನ

Pinterest LinkedIn Tumblr

ಶಿವಮೊಗ್ಗ: ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಡೈನಾಮೈಟ್‌ ಸ್ಟೋಟಗೊಂಡ ದುರಂತಕ್ಕೆ ಸಂಬಂಧಿಸಿದಂತೆ ಅಕ್ರಮ ಕಲ್ಲುಗಣಿಗಾರಿಕೆ ಆರೋಪದಡಿ ಮೂವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಜಮೀನು ಮೂಲ ಮಾಲೀಕ ಅವಿನಾಶ್ ಕುಲಕರ್ಣಿ, ಕಲ್ಲು ಗಣಿ ಪ್ರದೇಶದ ಗುತ್ತಿಗೆದಾರ ಸುಧಾಕರ್, ಅಕ್ರಮ ಕಲ್ಲು ಗಣಿಗಾರಿಕೆಗೆ ಡೈನಾಮೈಟ್‌ ಪೂರೈಸುತ್ತಿದ್ದ ಜೆಡಿಎಸ್‌ ಮುಖಂಡ ನರಸಿಂಹ ಬಂಧಿತರು.

ಘಟನೆ ಬಳಿಕ ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಮೂವರನ್ನು ಅರೆಸ್ಟ್‌ ಮಾಡಿದ್ದಾರೆ. ಈ ಮೂವರು ಒಪ್ಪಂದಂತೆ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರು. ನರಸಿಂಹ ಅಕ್ರಮ ಕಲ್ಲುಗಣಿಗಾರಿಕೆಗೆ ಜಿಲೆಟಿನ್ ಪೂರೈಸುತ್ತಿದ್ದ. ಹಾಗೂ ಸುಧಾಕರ್ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ. ನರಸಿಂಹ ಕಲ್ಲು ಕೊಟ್ಟರೆ ಸುಧಾಕರ್ ಕಲ್ಲು ಪುಡಿ ಮಾಡಿ ಕಳುಹಿಸಿಕೊಡುತ್ತಿದ್ದ. ಈ ಎಲ್ಲಾ ಕಾರ್ಯಗಳು ಪಾಲುದಾರಿಕೆಯಲ್ಲಿ ನಡೆಯುತ್ತಿತ್ತು. ಇನ್ನು ಈ ಮೂವರು ಪಕ್ಷಗಳ ರಾಜಕೀಯ ಮುಖಂಡರ ಆಪ್ತರಾಗಿದ್ದರು. ರಾಜಕೀಯ ನಾಯಕರ ಬೆಂಬಲದಿಂದಲೇ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ ಯಾರು ಪ್ರಶ್ನಿಸುತ್ತಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ಸಿಎಂ ಬಿಎಸ್‌ ಯಡಿಯೂರಪ್ಪ ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೆ ಈಗಾಗಲೇ ಉನ್ನತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಭರವಸೆ ನೀಡಿದ್ದಾರೆ.ಅಧಿಕಾರಿಗಳಿಗೆ ಸೂಚನೆ ನೀಡಿರುವ ಫಲವಾಗಿ ಇದೀಗ ಮೂವರ ಅರೆಸ್ಟ್‌ ನಡೆದಿದೆ. ಇನ್ನು ಈ ಭಾಗದಲ್ಲಿ ಕೆಲವು ಅಕ್ರಮ ಕ್ವಾರಿಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆಯೂ ಆರೋಪಗಳು ಕೇಳಿ ಬರುತ್ತಿವೆ.

ತನಿಖೆ ಒಂದೆಡೆಯಾದರೆ ಘಟನಾ ಸ್ಥಳಕ್ಕೆ ಅಂಬ್ಯುಲೆನ್ಸ್‌ಗಳು ಆಗಮಿಸಿದ್ದು ಛಿದ್ರ ಛಿದ್ರವಾಗಿರುವ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸುತ್ತಿದೆ. ಮೊತ್ತೊಂದೆಡೆ ಬಾಂಬ್‌ ಸ್ಕ್ವಾಡ್‌ ಕೂಡ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದೆ. ಒಟ್ಟಾರೆ ಯಾರದ್ದೋ ತಪ್ಪಿಗೆ ಹಲವು ಅಮಾಯಕ ಕಾರ್ಮಿಕರ ಜೀವ ಹೋಗಿದೆ. ಕೆಲಸಕ್ಕೆಂದು, ತುತ್ತು ಅನ್ನಕ್ಕಾಗಿ ಬಂದವರ ದೇಹವೇ ಛಿದ್ರ ಛಿದ್ರವಾಗಿ ಹೋಗಿಬಿಟ್ಟಿದೆ.

Comments are closed.