ಕರಾವಳಿ

ವಂಚಕ ಸ್ವಾಮಿಯಿಂದ ಕೊಟ್ಯಾಂತರ ರೂ. ವರ್ಗಾವಣೆ ಆರೋಪ : ಸಿಸಿಬಿ ವಿಚಾರಣೆಗೆ ಹಾಜರಾದ ನಟಿ ರಾಧಿಕಾ ಕುಮಾರಸ್ವಾಮಿ

Pinterest LinkedIn Tumblr

ಬೆಂಗಳೂರು: ಯುವರಾಜ್ ಸ್ವಾಮಿ ವಂಚನೆ ಪ್ರಕರಣ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ನಟಿ ರಾಧಿಕಾ ಕುಮಾರಸ್ವಾಮಿಯವರು ಶುಕ್ರವಾರ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಹಾಜರಾಗಿದ್ದಾರೆ.

ಬ್ಯಾಂಕ್ ಖಾತೆಗೆ 75 ಲಕ್ಷ ಹಣ ಜಮಾವಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಇಂದು ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು. ರಾಧಿಕಾ ಸಹೋದರ ರವಿರಾಜ್‌ ಸಹ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು.

ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರು ಬಂಧಿಸಿದ್ದ ಜ್ಯೋತಿಷಿ ಯುವರಾಜ್ ಅವರಿಂದ ರಾಧಿಕಾ ಕುಮಾರಸ್ವಾಮಿ ಅವರ ಖಾತೆಗೆ 75 ಲಕ್ಷ ರೂ. ಜಮಾವಣೆಯಾಗಿತ್ತು. ರಾಜಕಾರಣಿಗಳ ಹೆಸರಿನಲ್ಲಿ ಹಲವರಿಗೆ ವಂಚಿಸಿರುವ ಆರೋಪದ ಮೇರೆಗೆ ಸಿಸಿಬಿ ಬಂಧಿಸಿರುವ ಆರೋಪಿ ಯುವರಾಜ್ (ಸ್ವಾಮಿ) ಖಾತೆಯಿಂದ ರಾಧಿಕಾ ಅವರಿಗೆ ಕೋಟಿಗಟ್ಟಲೆ ಹಣ ವರ್ಗಾವಣೆಗೊಂಡಿರುವ ಆರೋಪ ಸಂಬಂಧ ರಾಧಿಕಾ ಸುದ್ದಿಗೋಷ್ಠಿ ನಡೆಸಿದ್ದರು.

‘ಯುವರಾಜ್ ತಮ್ಮ ಕುಟುಂಬಕ್ಕೆ 17 ವರ್ಷದಿಂದ ಪರಿಚಯವಿದ್ದರು. ಐತಿಹಾಸಿಕ ಸಿನಿಮಾವೊಂದಕ್ಕೆ ಮುಂಗಡವಾಗಿ ರೂ. 15 ಲಕ್ಷ ಹಾಕಿದ್ದರು. ನಿರ್ಮಾಪಕರೊಬ್ಬರಿಂದ ರೂ.60 ಲಕ್ಷ ಹಾಕಿಸಿದ್ದರು. ಇದನ್ನು ಹೊರತುಪಡಿಸಿ ಅವರೊಂದಿಗೆ ರಾಜಕೀಯ ವ್ಯವಹಾರಗಳು ನಡೆದಿಲ್ಲ’ ಎಂದು ಸ್ಪಷ್ಟನೆ ನೀಡಿದ್ದರು.

ಆದರೆ ಈ ಕುರಿತಂತೆ ಸ್ಪಷ್ಟನೆ ನೀಡುವಂತೆ ಸಿಸಿಬಿ ಎಸಿಪಿ ನಾಗರಾಜ್ ಅವರು ರಾಧಿಕಾ ಕುಮಾರಸ್ವಾಮಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು.

ಹೀಗಾಗಿ ಇಂದು ತಮ್ಮ ಸಹೋದರ ರವಿರಾಜ್ ಅವರ ಜೊತೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕೇಂದ್ರ ಕಚೇರಿಗೆ ಆಗಮಿಸಿ ಎಸಿಪಿ ನಾಗರಾಜ್ ಅವರ ಮುಂದೆ ವಿಚಾರಣೆಗೆ ಹಾಜರಾದರು. ಹಣ ವರ್ಗಾವಣೆಯಾದ ಕುರಿತಂತೆ ಸಿಸಿಬಿ ಪೊಲೀಸರು 44ಕ್ಕೂ ಹೆಚ್ಚು ಪ್ರಶ್ನೆಗಳ ಪಟ್ಟಿ ಸಿದ್ದಪಡಿಸಿಕೊಂಡು ರಾಧಿಕಾ ಅವರಿಂದ ಉತ್ತರ ಪಡೆದುಕೊಂಡರು ಎನ್ನಲಾಗಿದೆ.

ಮನೆಯಿಂದ ಹೊರಡುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಧಿಕಾ ಕುಮಾರಸ್ವಾಮಿಯವರು, ನೋಟಿಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ತರಳುತ್ತಿದ್ದೇನೆ. ವಿಚಾರಣೆ ಪೂರ್ಣಗೊಂಡ ಬಳಿಕ ಪ್ರತಿಕ್ರಿಯೆ ನೀಡುತ್ತೇನೆಂದು ಹೇಳಿದ್ದಾರೆ.

ನಾಟ್ಯರಾಣಿ ಶಾಂತಲಾ ಚಿತ್ರದಲ್ಲಿ ನಟಿಸಲು 75 ಲಕ್ಷ ರೂ.ಗಳ ಮುಂಗಡ ಹಣ ಪಡೆದಿದ್ದೆ. ಯುವರಾಜ್ ಅವರಿಂದ ಖಾತೆಯಿಂದ 15 ಲಕ್ಷ ಹಾಗೂ ನಿರ್ಮಾಪಕರ ಖಾತೆಯಿಂದ 60 ಲಕ್ಷ ಹಣ ನನ್ನ ಖಾತೆಗೆ ವರ್ಗಾವಣೆಯಾಗಿತ್ತು. ಚಿತ್ರದಲ್ಲಿ ನಟಿಸುವ ಕುರಿತಂತೆ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಆದರೂ ನನ್ನ ಖಾತೆಗೆ 75 ಲಕ್ಷ ವರ್ಗಾವಣೆಯಾಗಿತ್ತು ಎಂದು ರಾಧಿಕಾ ಕುಮಾರಸ್ವಾಮಿ ತಿಳಿಸಿದ್ದರು.

ನಾವು ಜ್ಯೋತಿಷಿ ಯುವರಾಜ್ ಒಳ್ಳೆಯ ವ್ಯಕ್ತಿ ಎಂದು ಭಾವಿಸೆದ್ದೆವು. ಇದೀಗ ಅವರ ಬಣ್ಣ ಬಯಲಾಗಿದೆ. ಹೀಗಾಗಿ ಜಮಾವಣೆಯಾದ ಹಣವನ್ನು ವಾಪಸ್ ಮಾಡಲಾಗುವುದು. ಇದೇ ವಿಚಾರವನ್ನು ಸಿಸಿಬಿ ವಿಚಾರಣೆ ಸಂದರ್ಭದಲ್ಲೂ ತಿಳಿಸಲಿದ್ದೇನೆ ಎಂದು ಹೇಳಿದ್ದರು.

Comments are closed.