ಮಂಗಳೂರು : ಬಜಪೆ ಶ್ರೀ ಶನೈಶ್ಚರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಇತ್ತೀಚಿಗೆ ವಿವಿಧ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಈ ಸಂದರ್ಭದಲ್ಲಿ ‘ ಶ್ರೀ ಶನೈಶ್ಚರ ಮಹಾತ್ಮೆ ‘. ಪುರಾಣ ಪ್ರವಚನವನ್ನು ಏರ್ಪಡಿಸಲಾಗಿತ್ತು. ಯಕ್ಷಗಾನ ಅರ್ಥಧಾರಿ, ಉಪನ್ಯಾಸಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರವಚನ ನೀಡಿದರು. ಗಾಯಕ,ಹರಿದಾಸ ತೋನ್ಸೆ ಪುಷ್ಕಳ ಕುಮಾರ್ ಕಾವ್ಯವಾಚನ ಮಾಡಿದರು.
ಕ್ಷೇತ್ರದ ಧರ್ಮದರ್ಶಿ ಆನಂದ ಪೂಜಾರಿ ಶಾಲು,ಸ್ಮರಣಿಕೆ ಮತ್ತು ದೇವರ ಪ್ರಸಾದ ನೀಡಿ ಕಲಾವಿದರನ್ನು ಸನ್ಮಾನಿಸಿದರು.
ಉದ್ಯಮಿಗಳಾದ ಸಂಜೀವ ಪೂಜಾರಿ ಮೆಲ್ಕಾರ್ ಮತ್ತು ಡಾ.ಎಸ್.ಎಂ. ಗೋಪಾಲಕೃಷ್ಣ ಆಚಾರ್ಯ ಮುಖ್ಯ ಅತಿಥಿಗಳಾಗಿದ್ದರು. ಪುರೋಹಿತ ಅಭಿಜಿತ್, ಗಣ್ಯರಾದ ಸಂತೋಷ್ ಕುಮಾರ್ ಕುಚ್ಚಿಗುಡ್ಡೆ , ಸಂದೀಪ್ ಕುಮಾರ್ ಕುಚ್ಚಿಗುಡ್ಡೆ , ಜಯಶಂಕರ ಕಾನ್ಸಾಲೆ ಉಪಸ್ಥಿತರಿದ್ದರು.
ಪತ್ರಕರ್ತ ರಾಜಾ ಬಂಟ್ವಾಳ ಸ್ವಾಗತಿಸಿದರು. ರಾಜೇಂದ್ರ ಪ್ರಸಾದ್ ಎಕ್ಕಾರ್ ವಂದಿಸಿದರು. ಸುರೇಶ್, ಜಗನ್ನಾಥ ಸಹಕರಿಸಿದರು.
ಧಾರ್ಮಿಕ ಕಾರ್ಯಕ್ರಮಗಳು:
ಬಜಪೆ ಶನೈಶ್ಚರ ಕ್ಷೇತ್ರದ ಮಹಾಗಣಪತಿ ಮತ್ತು ಪ್ರಧಾನ ದೇವತೆಗಳಿಗೆ ಗಣಹೋಮ, ನಾಗದೇವರಿಗೆ ಪಂಚಾಮೃತ ಅಭಿಷೇಕ, ಶ್ರೀ ಶನಿ ಶಾಂತಿ ಹೋಮ, ನವಗ್ರಹ ಶಾಂತಿ ಹೋಮ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ನೆರವೇರಿದವು.