ಕರಾವಳಿ

ಪುರುಷ ಪ್ರಧಾನ ವ್ಯವಸ್ಥೆಯೊಳಗಡೆ ಸಾಮಾನ್ಯ ಯುವತಿಯೊಬ್ಬಳು ಪಂಚಾಯತ್ ಅಧ್ಯಕ್ಷೆಯಾದಾಗ…….

Pinterest LinkedIn Tumblr

ಪುರುಷ ಪ್ರಧಾನ ವ್ಯವಸ್ಥೆಯೊಳಗಡೆ ಮಹಿಳಾ ಸಬಲೀಕರಣವೆಂಬುದು ಸಾಮಾನ್ಯ ವಿಷಯವಲ್ಲ. ಮಹಿಳೆ ಅಬಲೆಯಲ್ಲ,ಸಬಲೆ ಎಂದು ಎಷ್ಟೇ ಬೀಗಿದರೂ ಅವರಿಗೆ ಸಿಗಬೇಕಾದ ಅವಕಾಶಗಳನ್ನು ಸರಿಯಾಗಿ ನೀಡಿದರೆ ಮಾತ್ರ ಎಂತಹ ಕ್ಷೇತ್ರದಲ್ಲೂ ಮಿಂಚಬಲ್ಲರು ಎಂಬುದಕ್ಕೆ ಕೇರಳದ ತಾಜಾ ಉದಾಹರಣೆಗಳು ನಮ್ಮ ಮುಂದಿದೆ.

ಈಗಾಗಲೇ ಎಳೆಯ ಪ್ರಾಯದ ಯುವತಿಯರು ಕೇರಳದ ರಾಜದಾನಿಯ ಮೇಯರ್ ಹುದ್ದೆಯಿಂದ ಹಿಡಿದು ಪಂಚಾಯತ್ ಅಧ್ಯಕ್ಷೆಯವರೆಗೆ ಹಲವಾರು ಮಂದಿ ಆಯ್ಕೆಯಾಗಿರುವುದು ಮಹಿಳಾ ಸಮುದಾಯಕ್ಕೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.ಅದರಂತೆ ಗಡಿನಾಡ ಪ್ರದೇಶವಾದ ಮಂಜೇಶ್ವರದ ವರ್ಕಾಡಿಯಲ್ಲೂ ಅಂತಹ ಘಟನೆ ನಡೆದಿದೆ. ವರ್ಕಾಡಿ ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಗೊಂಡಿರುವ ಶ್ರೀಮತಿ ಭಾರತಿ.ಎಸ್ ರವರೂ ಕೂಡ ಮಹಿಳಾ ಸಮುದಾಯಕ್ಕೆ ಹೆಮ್ಮೆಯ ಸಂಗತಿ.

ಕರಾವಳಿ ಜಿಲ್ಲೆಯ ಬಂಟ್ವಾಳದಲ್ಲಿ ಹುಟ್ಟಿ ಬೆಳೆದು, ಪ್ರಾಥಮಿಕ,ಪ್ರೌಢ, ಕಾಲೇಜ್ ಶಿಕ್ಷಣವನ್ನು ಅಲ್ಲಿಯೇ ಪಡೆದ ಭಾರತಿಯವರು, ಎಳೆಯ ಪ್ರಾಯದಲ್ಲೇ ಬಡವರ ಶೋಷಿತರ ಸಂಕಷ್ಟವನ್ನು ಕಣ್ಣಾರೆ ಕಂಡವರು,ಅವರಿಗಾಗಿ ಮರುಗಿದವರು ಮಾತ್ರವಲ್ಲದೆ ಅವರಿಗಾಗಿ ಧ್ವನಿಯೆತ್ತಬೇಕೆಂಬ ಹಂಬಲವನ್ನು ಮೈಗೂಡಿಸಿಕೊಂಡರು.

ಇದಕ್ಕೆಲ್ಲಾ ಕಾರಣ ಹೆತ್ತವರು ಎಡಪಂಥೀಯ ವಿಚಾರಧಾರೆಗೆ ಹೊಂದಿಕೊಂಡು ಸಭೆ ಸಮಾರಂಭ ಹೋರಾಟಗಳಿಗೆ ಭಾಗವಹಿಸುತ್ತಿದ್ದಾಗ ತನ್ನಿಂದತಾನೆ ಅದರ ಪ್ರಭಾವ ಭಾರತಿಯವರ ಮೇಲೂ ಪ್ರವಹಿಸುತ್ತಿತ್ತು.

ಹೀಗೆ ಎಳೆಯ ಪ್ರಾಯದಲ್ಲೇ ಬಡವರ ಪರ ಕಾಳಜಿ, ಬಳಿಕ ಶೈಕ್ಷಣಿಕ ಜೀವನದಲ್ಲಿ ಮತ್ತಷ್ಟು ವ್ಯವಸ್ಥೆಯ ಬಗ್ಗೆ ಆಕ್ರೋಶ ಭುಗಿಲೆದ್ದಿತ್ತು.ಇವೆಲ್ಲವುಗಳು ಕ್ರಿಯೆಗಿಳಿಯಲು ಕಾಕತಾಳೀಯವೆಂಬಂತೆ ಭಾರತಿಯವರ ವೈವಾಹಿಕ ಜೀವನ ಗಡಿನಾಡ ಪ್ರದೇಶ ವಾದ ವರ್ಕಾಡಿಯಲ್ಲಿ ಪ್ರಾರಂಭಗೊಂಡಿತು.

ಎಳೆಯ ಪ್ರಾಯದಲ್ಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಭಾರತಿಯವರು ಸ್ಥಳೀಯವಾಗಿರುವ ಮಹಿಳಾ ಸಂಘ ಸಂಸ್ಥೆಯಲ್ಲಿ ಸಕ್ರೀಯರಾದರು. ಹೀಗೆ ಭಾರತಿಯವರ ಕ್ರಿಯಾಶೀಲತೆಯನ್ನು ಮನಗಂಡು ಕೇರಳ ರಾಜ್ಯದ ಮಹಿಳಾ ಸಬಲೀಕರಣದ ಭಾಗವಾಗಿರುವ ಕುಟುಂಬಶ್ರೀ ಯೋಜನೆಯ ಜವಾಬ್ದಾರಿ ಹೊರುವಂತೆ ಸಂಘಟನೆಯ ಹಿರಿಯರು ಪ್ರೋತ್ಸಾಹಿಸಿದರು.

ತನ್ನ ಕಾರ್ಯದಕ್ಷತೆಯ ಪರಿಣಾಮವಾಗಿ ಕಳೆದ 15 ವರ್ಷಗಳಿಂದ ಕುಟುಂಬಶ್ರೀ ಯೋಜನೆಯಲ್ಲಿ ಸಕ್ರಿಯರಾಗಿದ್ದಾರೆ.ಇದೇ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಸದಸ್ಯರಾಗಿ ಪಕ್ಷ ಹಾಗೂ ಸಾಮೂಹಿಕ ಸಂಘಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡರು.ಹೀಗೆ ಹಂತಹಂತವಾಗಿ ಸಾಮಾನ್ಯ ಯುವತಿಯಾಗಿದ್ದ ಭಾರತಿಯವರು ಜವಾಬ್ದಾರಿ ಸ್ಥಾನಗಳನ್ನು ಅಲಂಕರಿಸುವ ಮೂಲಕ ನಾಯಕತ್ವ ಸ್ಥಾನಕ್ಕೇರಿದರು.

ಇಂತಹ ನಾಯಕರು ನಿಜವಾಗಲೂ ಜನನಾಯಕರಾಗಬೇಕೆಂದು ಬಯಸಿದ ಸಿಪಿಐಎಂ ,ಪ್ರಪ್ರಥಮ ಬಾರಿಗೆ 2010ರಲ್ಲಿ ವರ್ಕಾಡಿ ಪಂಚಾಯತ್ ನ ಕೊಣಿಬೈಲ್ ವಾರ್ಡಿನಲ್ಲಿ ಭಾರತಿಯವರನ್ನು ಕಣಕ್ಕಿಳಿಸಿತು.

ಭರ್ಜರಿ ಜಯಗಳಿಸಿದ ಭಾರತಿಯವರು ತನ್ನ ಸಂಘಟನಾ ಕೆಲಸ ಕಾರ್ಯದ ಜೊತೆಗೆ ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುವ ಮೂಲಕ ಊರಿನ ಅಭಿವ್ರದ್ದಿಗೂ ಸ್ಪಂದಿಸಿದರು.

ಜನರ ನಿರೀಕ್ಷೆಗೂ ಮೀರಿದ ಸ್ಪಂದನೆಯಿಂದಾಗಿ ಭಾರತಿಯವರು ಅದೇ ವಾರ್ಡಿನಲ್ಲಿ 2015 ರಲ್ಲೂ ಮರು ಆಯ್ಕೆಯಾದರು. ಊರಿನ ಅಭಿವ್ರದ್ದಿ ಕಾರ್ಯದ ಜೊತೆಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದುಡಿಯುವ ಕಾರ್ಮಿಕರ ಧ್ವನಿಯಾಗಿ ಶ್ರಮಿಸಿದರು.

ಡಿವೈ‌ಎಫ್‌ಐ ಸಂಘಟನೆಯಲ್ಲಿ ಶಕ್ತಿಮೀರಿ ದುಡಿಯುವ ಮೂಲಕ ಯುವಜನತೆಯ ಆಶಾಕಿರಣವಾಗಿ ಹೊರಹೊಮ್ಮಿದರು.

ಸಿಪಿಐಎಂ ಮಂಜೇಶ್ವರ ಏರಿಯಾ ಸಮಿತಿ ಸದಸ್ಯರಾಗಿ ದುಡಿಯುವ ವರ್ಗದ ಕಣ್ಮಣಿಯಾದರು. ಎಳೆಯ ಮಕ್ಕಳನ್ನು ಸಂಘಟಿಸುವ ಬಾಲಸಂಘದ ಮಂಜೇಶ್ವರ ಏರಿಯಾ ಸಂಚಾಲಕರಾಗಿ ಎಳೆಯ ಮಕ್ಕಳ ಹ್ರದಯದಲ್ಲೂ ಪ್ರೀತಿಪಾತ್ರರೆನಿಸಿಕೊಂಡರು.

ಹೀಗೆ ಅತ್ಯಲ್ಪ ಕಾಲಾವಧಿಯಲ್ಲಿ ಗರಿಷ್ಠ ಪ್ರಮಾಣದ ಕಾರ್ಯ ಸಾಧಿಸಲು ಸಾಧ್ಯವಾದದ್ದು ತಾನು ನಂಬಿರುವ ಸಿದ್ದಾಂತ,ಬದ್ದತೆ,ಅಚಲ ನಂಬಿಕೆಯೇ ಈಮಟ್ಟಿಗೆ ತಂದು ನಿಲ್ಲಿಸಿದೆ.

ಈ ಬಾರಿಯ ಪಂಚಾಯತ್ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಗೆದ್ದಿರುವ ವಾರ್ಡಿನಲ್ಲಿ ತಾನು ನಿಲ್ಲುವುದಾಗಿಯೂ,ಜನತೆಯ ಪ್ರೀತಿ ವಿಶ್ವಾಸವನ್ನೇ ಬಂಡವಾಳವನ್ನಾಗಿಸಿ ಗೆದ್ದೇ ಗೆಲ್ಲುವುದಾಗಿ ಭರವಸೆ ನೀಡಿರುವ ಹಿನ್ನಲೆಯಲ್ಲಿ 8ನೇ ತಲಕ್ಕಿ ವಾರ್ಡಿನಲ್ಲಿ ಸ್ಪರ್ಧಿಸಿ ಅತ್ಯಧಿಕ ಮತಗಳನ್ನು ಪಡೆದು ಭರ್ಜರಿ ಜಯಗಳಿಸಿದ ಭಾರತಿಯವರು ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರೆ ಎಂಬ ಖ್ಯಾತಿಗೆ ಪಾತ್ರರಾದರು.

ಒಟ್ಟಿನಲ್ಲಿ ಕರಾವಳಿ ಜಿಲ್ಲೆಯಲ್ಲಿ ಹುಟ್ಟಿ ಬೆಳೆದು,ಎಳೆಯ ಪ್ರಾಯದಲ್ಲೇ ಮನದಲ್ಲಿ ಮೂಡಿದ ಚಿಂತನೆಗಳು, ಅವುಗಳನ್ನು ಕ್ರಿಯೆಗಿಳಿಸಲು ಕಾಕತಾಳೀಯವೆಂಬಂತೆ ಕಮ್ಯೂನಿಸ್ಟರ ಭದ್ರಕೋಟೆಯಾದ ಕೇರಳದ ಮಣ್ಣಿನಲ್ಲಿ ಕಳೆದ 15 ವರ್ಷಗಳ ಕಾಲ ಶ್ರಮವಹಿಸಿದ ಪರಿಣಾಮ ಇಂದು ಪಂಚಾಯತ್ ಅಧ್ಯಕ್ಷೆ ಆಗಲು ಸಹಕಾರಿಯಾಯಿತು.

_ಸಹನಾ ಪೂಜಾರಿ, ಬಂಟ್ವಾಳ

Comments are closed.