ಬೆಂಗಳೂರು ; ಕರೋನಾ ಸೋಂಕಿನಿಂದ ರಾಜ್ಯದಲ್ಲಿ ಮುಚ್ಚಲ್ಪಟ್ಟ ಶಾಲೆಗಳು ಜ1 2021 ರಂದು ಮತ್ತೆ ತೆರೆಯುತ್ತಿದೆ. ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭ ಮಾಡಲಾಗುತ್ತಿದೆ ಎಂದು ಕೆಲವು ದಿನಗಳ ಹಿಂದೆ ರಾಜ್ಯಸರ್ಕಾರ ಅಧಿಕೃತ ಮಾಹಿತಿ ಹೊರಹಾಕಿದೆ.
ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಗರದ ಕೆಲವು ಶಾಲಾ ಕಾಲೇಜುಗಳಿಗೆ ಭೇಟಿನೀಡಿ ಶಿಕ್ಷಕರೊಂದಿಗೆ ಚರ್ಚೆ ನಡೆಸಿದ್ದಾರೆ.
ಯಲಹಂಕ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಹಾರಾಣಿ ಲಕ್ಷ್ಮೀ ಅಮ್ಮಣಿ ಕಾಲೇಜು, ಮಲ್ಲೇಶ್ವರಂ, ಹೆಬ್ಬಾಳ ಸೇರಿದಂತೆ ನಗರದ ಇತೆರೆಡೆ ಭೇಟಿ ನೀಡಿ ಕೊಠಡಿ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಜೊತೆಗೆ ಶಿಕ್ಷಕರಿಗೆ ಕೆಲವೊಂದು ಸಲಹೆ ನೀಡಿದ್ದಾರೆ.
ಕರೋನಾ ಮುಂಜಾಗೃತೆಯ ಬಗ್ಗೆ ಮಕ್ಕಳಿಗೆ ಪೋಷಕರಿಗೆ ಸೂಕ್ತ ಸಲಹೆ ನೀಡುವುದು. ಪ್ರತಿನಿತ್ಯ ಶಾಲಾ ಆವರಣ ಕೊಠಡಿ ಶೌಚಾಲಯಗಳಿಗೆ ಸ್ಯಾನಿಟೈಝರ್ ಬಳಸಿ ಶುಚಿಗೊಳಿಸ ಬೇಕು. ಫೇಸ್ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಬಳಕೆ ಮಾಡುವುದು. ಶಿಕ್ಷಕರು ಮಕ್ಕಳ ಸಾಮಾಜಿಕ ಅಂತರ ಮತ್ತು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕೆಂದು ಸಲಹೆ ನೀಡಿದ್ದಾರೆ.
ಶಿಕ್ಷಕರು ಪಠ್ಯ ಕ್ರಮವನ್ನು ಪೂರ್ಣಗೊಳಿಸುವತ್ತ ಗಮನಹರಿಸಬೇಕು. ಮಕ್ಕಳು ಶಾಲೆಗೆ ಗೈರಾಗದಂತೆ ಸೂಚನೆ ನೀಡಬೇಕು. ಹಿಂದಿನ ವರ್ಷದ ಬಸ್ ಪಾಸ್ ಬಳಕೆಗೆ ಅವಕಾಶವಿದ್ದು, ಅದನ್ನೆ ಬಳಸಬಹುದು ಎಂಬ ಮಾಹಿತಿ ವಿದ್ಯಾರ್ಥಿಗಳಿಗೆ ತಿಳಿಸಬೇಕೆಂದಿದ್ದಾರೆ.
ಈ ವೇಳೆ ಸಚಿವರೊಂದಿಗೆ ಪ್ರತಿಕ್ರಿಯಿಸಿದ ಪ್ರಾಂಶುಪಾಲರೊಬ್ಬರು ಈಗಾಗಲೆ ಪೋಷಕರೊಂದಿಗೆ ಚರ್ಚಿಸಲಾಗಿದ್ದು, ಸರ್ಕಾರದಿಂದ ಬಂದ ಮಾರ್ಗಸೂಚಿಗಳನ್ನು ತಿಳಿಸಲಾಗಿದೆ. ಪೋಷಕರು ಮಕ್ಕಳನ್ನು ಶಾಲಾಗೆ ಕಳುಹಿಸಲು ಉತ್ಸುಕರಾಗಿದ್ದಾರೆ. ಉಳಿದ ತರಗತಿಗಳ ಆರಂಭದ ಬಗ್ಗೆ ಸಚಿವರೊಂದಿಗೆ ವಿಚಾರಿಸಿದಾಗ ಈ ಬಗ್ಗೆ ಸದ್ಯದಲ್ಲಿಯೇ ತಿಳಿಸಲಾಗುವುದು ಎಂದಿದ್ದಾರೆ.
ಸರ್ಕಾರಿ ಶಾಲಾ-ಕಾಲೇಜು ವಿದ್ಯಾರ್ಥಿ ಸಾಧನೆಯ ಬಗ್ಗೆ ನೆನಪಿಸಿಕೊಂಡ ಸುರೇಶ್ ಕುಮಾರ್ ಈ ಬಾರಿಯ ಎಸ್‌ಎಸ್‌ಎಲ್ಸಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸರ್ಕಾರಿ ಶಾಲಾ ಮಕ್ಕಳು ಮೇಲುಗೈ ಸಾಧಿಸಿದ್ದಾರೆ. ಇದು ರಾಜ್ಯಕ್ಕೆ ಹೆಮ್ಮೆ ತರುವಂತಹ ವಿಚಾರ ಎಂದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿದ್ದಾರೆ.