
ಚೆನ್ನೈ, ಡಿಸೆಂಬರ್. 29: ಚುನಾವಣಾ ರಾಜಕೀಯಕ್ಕೆ ಇಳಿಯುವುದಾಗಿ ಘೋಷಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಇದೀಗ ಅದರಿಂದ ಹಿಂದೆ ಸರಿದಿದ್ದಾರೆ.
ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸ್ಪರ್ಧಿಸುತ್ತಾರಾ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಜನಿಕಾಂತ್ ಅವರು ಸುದೀರ್ಘ ಪತ್ರದ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ರಾಜಕೀಯದಿಂದ ಹಿಂದೆ ಸರಿದಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆ ಮುಂದಿನ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದ್ದು, ಜನವರಿಯಿಂದ ಡೂ ಆರ್ ಡೈ ರೀತಿಯಲ್ಲಿ ಮೂರು ಪುಟಗಳ ವಿವರಣೆ ನೀಡಿರುವ ಅವರು ಅದನ್ನು ಟ್ವೀಟ್ಗೆ ಅಪ್ಲೋಡ್ ಮಾಡಿ, ತಮಿಳುನಾಡು ಜನರ ಕ್ಷಮೆಯಾಚಿಸಿದ್ದಾರೆ.
ಈ ಮೂಲಕ 70 ವರ್ಷ ವಯಸ್ಸಿನ ನಟ ರಜನಿಕಾಂತ್ ಅವರು ಸಕ್ರಿಯ ರಾಜಕೀಯ ಪ್ರವೇಶಕ್ಕೆ ಮುನ್ನ ದೊಡ್ಡ ಬಾಂಬ್ ಹಾಕಿದ್ದಾರೆ. ಆರೋಗ್ಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜಕೀಯ ಪಕ್ಷವನ್ನು ಜನವರಿ ತಿಂಗಳಲ್ಲಿ ಸ್ಥಾಪಿಸುತ್ತೇವೆ. ಇದಕ್ಕೆ ಸಂಬಂಧಿಸಿ ಘೋಷಣೆಯನ್ನು ಡಿಸೆಂಬರ್ 31ರಂದು ಮಾಡುತ್ತೇವೆ. ಪ್ರತಿಯೊಂದನ್ನೂ ನಾವು ಬದಲಾಯಿಸೋಣ. ಸದ್ಯ ಎದುರಾಗಿರುವ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ತೇವೆ. ನಾವು ಪ್ರಾಮಾಣಿಕ, ಪಾರದರ್ಶಕ, ಭ್ರಷ್ಟಾಚಾರ ಮುಕ್ತ ಅಧ್ಯಾತ್ಮಿಕ ರಾಜಕಾರಣವನ್ನು ಮಾಡುತ್ತೇವೆ ಎಂದು ಪಕ್ಷದ ಧ್ಯೇಯೋದ್ದೇಶವನ್ನೂ ಡಿಸೆಂಬರ್ 3ರಂದು ಬಹಳ ವಿಶ್ವಾಸದಿಂದಲೇ ತಮಿಳು ಸೂಪರ್ಸ್ಟಾರ್ ರಜಿನಿಕಾಂತ್ ತಿಳಿಸಿದ್ದರು.
ಆದರೆ ಈಗ ರಾಜಕೀಯ ಪ್ರವೇಶದಿಂದ ಹಿಂದೆ ಸರಿದಿರುವ ಅವರು ರಾಜಕಾರಣದ ಹೊರತಾಗಿ ಜನಸೇವೆ ಮಾಡುವೆ. ಆರೋಗ್ಯ ಸ್ಥಿತಿ ಸರಿಯಾಗಿಲ್ಲದ ಕಾರಣ ಮತ್ತು ಕೋವಿಡ್ ಪರಿಸ್ಥಿತಿಯ ಕಾರಣ ಸದ್ಯ ಚುನಾವಣಾ ಕಣಕ್ಕೆ ಇಳಿದು ಕೆಲಸಮಾಡಲಾರೆ. ಹೀಗಾಗಿ ರಾಜಕೀಯದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಮೂರ್ನಾಲ್ಕು ದಿನಗಳ ಹಿಂದಷ್ಟೇ ಅವರು ಅಣ್ಣಾತ್ತೆ ಚಿತ್ರೀಕರಣದ ಸಂದರ್ಭದಲ್ಲಿ ರಕ್ತದೊತ್ತಡದ ಸಮಸ್ಯೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಒಂದು ದಿನ ಇದ್ದು ಚಿಕಿತ್ಸೆ ಪಡೆದಿದ್ದರು.
ಅಣ್ಣಾತೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್ ಅವರಲ್ಲಿ ರಕ್ತದೊತ್ತಡದ ಏರಿಳಿತ ಮತ್ತು ಬಳಲಿಕೆ ಕಂಡುಬಂದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರದಂದು ಹೈದರಾಬಾರಿನ ಜ್ಯುಬಿಲಿಹಿಲ್ಸ್ ನಲ್ಲಿರುವ ಅಪೊಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಬಿಡುಗಡೆಯಾಗುವ ವೇಳೆ ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ಡಾಕ್ಟರ್ ಸಲಹೆ ನೀಡಿದ್ದರು ಎಂಬುದನ್ನು ಅವರು ಹೇಳಿದ್ದರು.
Comments are closed.