ಕರಾವಳಿ

ರಾಷ್ಟ್ರೀಯ ಮಾಜಿ ಕಬಡ್ಡಿ ಆಟಗಾರ, ಬಹುಮುಖ ಪ್ರತಿಭೆ ರತ್ನಾಕರ ಪುತ್ರನ್ ನಿಧನ

Pinterest LinkedIn Tumblr

ಮಂಗಳೂರು: ರಾಷ್ಟ್ರೀಯ ಮಾಜಿ ಕಬಡ್ಡಿ ಆಟಗಾರ, ಸಂಘಟನಾ ಚತುರ, ಶಿಕ್ಷಣ ಪ್ರೇಮಿಯಾಗಿ ಸಮಾಜದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಚೇತನ ರತ್ನಾಕರ ಪುತ್ರನ್ ಅವರು ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ರತ್ನಾಕರ ಪುತ್ರನ್ ಅವರು ಇಂದು ಡಿ 27 ರ೦ದು ಇಹಲೋಕವನ್ನು ತ್ಯಜಿಸಿದ್ದಾರೆ.

ಮಂಗಳೂರಿನ ಬೊಕ್ಕಪಟ್ಣದ ದೇವಪ್ಪ ಕರ್ಕೇರ ಮತ್ತು ಸೇಸಮ್ಮ ಪುತ್ರನ್ ದಂಪತಿಯ ಪುತ್ರನಾಗಿ ಜನಿಸಿದ್ದ ರತ್ನಾಕರ ಪುತ್ರನ್ ಅವರು ಬೊಕ್ಕಪಟ್ಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ಬಳಿಕ ಮಂಗಳೂರು ಡೊಂಗರಕೇರಿಯ ಕೆನರಾ ಮೈನ್‍ನಲ್ಲಿ ಪ್ರೌಢಶಿಕ್ಷಣವನ್ನು ಪೂರೈಸಿದ್ದರು.

ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ್ದರು. ಎಳವೆಯಿಂದಲೇ ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ರತ್ನಾಕರ ಪುತ್ರನ್ ಸಣ್ಣಂದಿನಿಂದಲೇ ಈ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದರು. ಈ ನಿಟ್ಟಿನಲ್ಲಿ ಇವರು ಬೆಳೆದದ್ದು ಕಬಡ್ಡಿ ಕ್ರೀಡೆಯಲ್ಲಿ. ಕಬಡ್ಡಿಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ರತ್ನಾಕರ ಪುತ್ರನ್ ಅವರು ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ.

ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಗಳಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದ ಪ್ರಮುಖ ಆಟಗಾರರಾಗಿದ್ದರು. ಕಬಡ್ಡಿಯ ಜೊತೆಗೆ ಉತ್ತಮ ಕ್ರಿಕೆಟ್ ಪಟುವೂ ಆಗಿದ್ದರು. ಆ ಸಮಯದಲ್ಲಿ ರಬ್ಬರ್ ಬಾಲ್ ಕ್ರಿಕೆಟ್ ಜನಪ್ರಿಯತೆಯನ್ನು ಗಳಿಸಿದ್ದು, ಕ್ರಿಕೆಟ್‍ನಲ್ಲೂ ಸಾಕಷ್ಟು ಪ್ರಸಿದ್ಧಿಯನ್ನು ಪಡೆದು ಕೊಂಡಿದ್ದರು.

ತಾವು ಬೆಳೆಯುವ ಜೊತೆಗೆ ಸಮಾಜದ ಇತರರೂ ಬೆಳೆಯಬೇಕು ಎನ್ನುವ ಮಾತಿಗೆ ಬದ್ಧರಾಗಿದ್ದ ರತ್ನಾಕರ ಪುತ್ರನ್ ಅವರು ಈ ನಿಟ್ಟಿನಲ್ಲಿ ಸೇಸಮ್ಮ ಪುತ್ರನ್ ಮತ್ತು ಅಗಲಿದ ಸಹೋದರ ಮಾಧವ ಪುತ್ರನ್ ಅವರ ನೆನಪಿನಲ್ಲಿ ಫೌಂಡೇಷನ್ ಒಂದನ್ನು ಸ್ಥಾಪಿಸಿದ್ದರು. ಆ ಮೂಲಕ ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ತಾನು ಕಲಿತ ಬೊಕ್ಕಪಟ್ಣ ಶಾಲೆಯನ್ನು ಉಳಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಪುಸ್ತಕ ವಿತರಣೆ ಇತ್ಯಾದಿಗಳನ್ನು ಮಾಡುತ್ತಿದ್ದರು. ಜೊತೆಗೆ ತಮ್ಮದೇ ಖರ್ಚಿನಲ್ಲಿ ಶಾಲೆಗೆ ಗೌರವ ಶಿಕ್ಷಕರನ್ನು ನೇಮಿಸಿ ಆ ಮೂಲಕ ಶಾಲೆಯ ಉಳಿವಿಗೆ ಪ್ರಯತ್ನಿಸುತ್ತಿದ್ದರು. ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಗೊಳ್ಳುವ ಯುವಸಮೂಹಕ್ಕೂ ಬೆನ್ನೆಲುಬಾಗಿದ್ದರು. ಆರ್ಥಿಕ ನೆರವು ಒದಗಿಸುವುದು, ಪ್ರೋತ್ಸಾಹಧನ ಪಡೆಯಲು ನೆರವಾಗುವ ಮೂಲಕ ಯುವಜನತೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದರು.

ಅಷ್ಟೇ ಅಲ್ಲದೆ ಕ್ರೀಡಾ ಕೋಟದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯುವ ನಿಟ್ಟಿನಲ್ಲಿ ನೆರವು ನೀಡುತ್ತಿದ್ದರು.

ಕ್ರೀಡಾಕೂಟಗಳು, ಸಾಂಸ್ಕøತಿಕ ಕೂಟಗಳನ್ನು ಸಂಘಟಿಸುವುದರಲ್ಲಿ ನಿಪುಣರಾಗಿದ್ದ ಇವರು 2014ರಲ್ಲಿ ಮಂಗಳೂರಿನಲ್ಲಿ 26 ಸೌತ್ ಝೋನ್ ಸೀನಿಯರ್ ನ್ಯಾಷನಲ್ ಹ್ಯಾಂಡ್‍ಬಾಲ್ ಚಾಂಪಿಯನ್‍ಶಿಪ್ ಎನ್ನುವ ಸ್ಪರ್ಧಾಕೂಟವನ್ನು ಆಯೋಜನೆ ಮಾಡಿದ್ದರು. ಬೀಚ್ ಕಬಡ್ಡಿ ಟೂರ್ನ್‍ಮೆಂಟ್ ಎನ್ನುವ ವಿನೂತನ ಪರಿಕಲ್ಪನೆಯ ಕಬಡ್ಡಿ ಪಂದ್ಯಾಟವನ್ನೂ ಆಯೋಜನೆ ಮಾಡಿರುವುದು ರತ್ನಾಕರ ಪುತ್ರನ್ ಅವರ ಹೆಗ್ಗಳಿಕೆಯಾಗಿತ್ತು.

ಮಹಿಳಾ ಸಬಲೀಕರಣದ ಬಗ್ಗೆಯೂ ಸಾಕಷ್ಟು ಚಿಂತನೆಯನ್ನು ಹೊಂದಿದ್ದ ರತ್ನಾಕರ್ ಪುತ್ರನ್ ಅವರು ಈ ನಿಟ್ಟಿನಲ್ಲೂ ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಕರ್ನಾಟಕ ಪಾಲಿಟೆಕ್ನಿಕ್ ಸಹಕಾರದೊಂದಿಗೆ ಸ್ಥಳೀಯ ಮಹಿಳೆಯರಿಗೆ ಕಂಪ್ಯೂಟರ್ ಕಲಿಕೆ, ಟೈಲರಿಂಗ್, ಬ್ಯೂಟಿಷಿಯನ್ ಇತ್ಯಾದಿ ವಿಚಾರಗಳ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿದ್ದರು.

ಕ್ರೀಡೆಯ ಜೊತೆಗೆ ಸಾಂಸ್ಕøತಿಕ ಚಟುವಟಿಕೆಗಳಲ್ಲೂ ಅಪಾರ ಆಸಕ್ತಿ ಹೊಂದಿದ್ದ ರತ್ನಾಕರ ಪುತ್ರನ್ ಅವರು ನಾಟಕಗಳಲ್ಲೂ ಮನೋಜ್ಞವಾಗಿ ಅಭಿನಯಿಸುತ್ತಿದ್ದರು. ಅವರ ಆಕರ್ಷಕ ಮೈಕಟ್ಟು ಪಾತ್ರಗಳಿಗೆ ಜೀವವನ್ನು ತುಂಬುತ್ತಿತ್ತು. ಜೊತೆಗೆ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದ ರತ್ನಾಕರ ಸುವರ್ಣ ಅವರು ತನ್ನ ತಾಯಿಯ ಹೆಸರಿನಲ್ಲಿ ಸೇಸ್ಮಾ ಮೆಡಿಕಲ್ ಸ್ಟೋರ್ ಮತ್ತು ವೈನ್‍ಸ್ಟೋರ್ ಹೊಂದಿದ್ದರು. ಸುಲ್ತಾನ್ ಬತ್ತೇರಿ-ಬೋಳೂರು ರಸ್ತೆಯಲ್ಲಿ ‘ಸೇಸ್ಮಾ ರಿವರ್ ವ್ಯೂ’ ಎನ್ನುವ ಸ್ಥಳವನ್ನು ಹೊಂದಿದ್ದು, ಅಲ್ಲಿ ಬಡವರಿಗೆ ಸಮಾರಂಭಗಳನ್ನು ಕಡಿಮೆ ಖರ್ಚಿನಲ್ಲಿ ನೆರವೇರಿಸಲು ನೆರವಾಗುತ್ತಿದ್ದರು.

ಸ್ನೇಹಜೀವಿಯಾಗಿ ಎಲ್ಲರೊಂದಿಗೆ ನಗುಮೊಗದೊಂದಿಗೆ ಬೆರೆಯುತ್ತಿದ್ದ ಸರಳ ವ್ಯಕ್ತಿತ್ವ ರತ್ನಾಕರ್ ಪುತ್ರನ್ ಅವರದ್ದಾಗಿತ್ತು. ರಾಷ್ಟ್ರೀಯ ಕಬಡ್ಡಿ ಪಟು, ಶಿಕ್ಷಣಪ್ರೇಮಿ ರತ್ನಾಕರ ಪುತ್ರನ್ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಆಪ್ತರು, ಬಂಧುಮಿತ್ರರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

Comments are closed.