ಕರಾವಳಿ

“ಹಿಂದೂ ಸಂಸ್ಕೃತಿ – ನಮ್ಮ ಹೆಮ್ಮೆ” ಕಾರ್ಯಕ್ರಮದಲ್ಲಿ ಹೊಸ ವರ್ಷವನ್ನು ಯುಗಾದಿಯಂದೇ ಆಚರಿಸಲು 350 ಯುವಕ-ಯುವತಿಯರಿಂದ ಪ್ರತಿಜ್ಞೆ!

Pinterest LinkedIn Tumblr

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆನ್ಲೈನ್ ಮೂಲಕ ‘ಹಿಂದೂ ಸಂಸ್ಕೃತಿ – ನಮ್ಮ ಹೆಮ್ಮೆ’ ಎಂಬ ಕಾರ್ಯಕ್ರಮ ಸಂಪನ್ನ

ದಿನಾಂಕ 25.12.2020ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆನ್ಲೈನ್ ಮೂಲಕ “ಹಿಂದೂ ಸಂಸ್ಕೃತಿ – ನಮ್ಮ ಹೆಮ್ಮೆ” ಎಂಬ ಉಪನ್ಯಾಸ ವನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ 350ಕ್ಕೂ ಅಧಿಕ ಯುವಕ ಮತ್ತು ಯುವತಿಯರು ಭಾಗವಹಿಸಿದ್ದರು.

ಈ ಉಪನ್ಯಾಸವನ್ನು ಸನಾತನ ಸಂಸ್ಥೆಯ ಸೌ. ಲಕ್ಷ್ಮೀ ಪೈ ಇವರು ನೀಡಿದರು, ಹಾಗೆಯೇ ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ರಮೇಶ ರಾಯಚೂರು ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಸುಮಾರು 350ಕ್ಕೂ ಹೆಚ್ಚು ಯುವಕ-ಯುವತಿಯರು ಆನ್‌ಲೈನ್ ಮೂಲಕ ಪಾಲ್ಗೊಂಡು ಡಿಸೆಂಬರ್ 31ರಂದು ಅಲ್ಲ ಯುಗಾದಿಯಂದೇ ಹೊಸ ವರ್ಷ ಆಚರಿಸಲು ಪ್ರತಿಜ್ಞೆ ಮಾಡಿದರು.

ಈ ವೇಳೆ ಸೌ. ಪೈಯವರು ಮಾತನಾಡುತ್ತಾ “ಜೂಲಿಯಸ್ ಸಿಸರ್ ನಿಂದ ನಿರ್ಮಾಣ ವಾದ ಜನವರಿ 1ರಂದು ಆಚರಿಸುವ ಹೊಸ ವರ್ಷ ತುಂಬಾ ಇತ್ತೀಚಿನದ್ದು, ಇದಕ್ಕೆ ಯಾವುದೇ ಐತಿಹಾಸಿಕ, ನೈಸರ್ಗಿಕ ಕಾರಣಗಳು ಇಲ್ಲ. ಅದರ ಬದಲು ಯುಗಾದಿಯಂದು ಹೊಸ ವರ್ಷ ಆಚರಣೆ ಮಾಡುವುದಕ್ಕೆ ಪೌರಾಣಿಕ, ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳು ಇದೆ.

ಇದೇ ದಿನ ಬ್ರಹ್ಮ ದೇವರು ಸೃಷ್ಟಿಯನ್ನು ನಿರ್ಮಾಣ ಮಾಡಿದರು, ಶಾಲಿವಾಹನ ಶಕೆ ಪ್ರಾರಂಭವಾದದ್ದು ಕೂಡ ಇದೇ ದಿನ. ವಾತಾವರಣದಲ್ಲಿ ಸಮಶೀತೋಷ್ಣ ಇರುವ ನೈಸರ್ಗಿಕ ಕಾರಣಗಳನ್ನು ಹೊಂದಿರುವ ಯುಗಾದಿಯಂದು ಹೊಸ ಆಚರಣೆ ಮಾಡುವುದು ಭಾರತೀಯ ಹವಾಗುಣ, ಭಾರತದ ಸಂಸ್ಕೃತಿಗೆ ಅತ್ಯಂತ ಪೂರಕವಾಗಿದೆ. ಸೂರ್ಯೋದಯದ ನಂತರ ಪೂಜೆಯೊಂದಿಗೆ ಹೊಸ ವರ್ಷ ಆಚರಣೆ ಮಾಡುವುದು ಭಾರತೀಯ ಸಂಸ್ಕೃತಿಯಾಗಿದೆಯೇ ವಿನಃ ಮಧ್ಯ ರಾತ್ರಿ ಮದ್ಯ ಕುಡಿದು ಹೊಸ ವರ್ಷಾಚರಣೆಯನ್ನು ಮಾಡುವುದಲ್ಲ ಎಂದು ಹೇಳಿದರು.

ಹಿಂದೂಗಳು ಡಿಸೆಂಬರ್ 31ರ ರಾತ್ರಿ ಹೊಸ ವರ್ಷ ಆಚರಣೆ ಮಾಡುವುದು ಎಂದರೆ ಒಂದು ದಿನದ ಮತಾಂತರವೇ ಆಗಿದೆ. ಅದಕ್ಕಾಗಿ ಯಾರು ಸಹ ಡಿಸೆಂಬರ್ 31ರಂದು ಹೊಸ ವರ್ಷ ಆಚರಣೆ ಮಾಡಬಾರದು ಅದರ ಬದಲು ಯುಗಾದಿಯಂದು ಹೊಸ ವರ್ಷ ಆಚರಣೆ ಮಾಡಲು ಕರೆ ನೀಡಿದರು. ಅದಕ್ಕೆ ಸ್ಪಂದಿಸಿದ ಯುವಕ ಯುವತಿಯರು ಡಿಸೆಂಬರ್ ೩೧ ರಂದು ಹೊಸ ವರ್ಷ ಆಚರಣೆ ಮಾಡದೇ, ಯುಗಾದಿಯಂದು ಹೊಸ ವರ್ಷ ಅಚರಣೆ ಮಾಡುತ್ತೇವೆಂದು ಪ್ರತಿಜ್ಞೆ ಮಾಡಿದರು.

ಸೌ. ಲಕ್ಷ್ಮೀ ಪೈಯವರು ಈ ವೇಳೆ ಮುಂದಿನಂತೆ ಪ್ರತಿಜ್ಞೆಯನ್ನು ಮಾಡಿಸಿದರು ‘ನಾವು ಧರ್ಮ ಸಂಸ್ಥಾಪನೆಯ ಕಾರ್ಯ ಮಾಡುವ ಭಗವಾನ್ ಶ್ರೀಕೃಷ್ಣನ ಚರಣದಲ್ಲಿ ಪ್ರತಿಜ್ಞೆ ಮಾಡುತ್ತೇವೆ, ನಾವು ನಮ್ಮ ಸರ್ವಶ್ರೇಷ್ಠ ಪೂರ್ವಜರಾದ ಋಷಿಮುನಿಗಳು ಹಾಕಿಕೊಟ್ಟಿರುವ ಪರಂಪರೆಯನ್ನು ಅಭಿಮಾನದಿಂದ ಪಾಲಿಸುತ್ತೇವೆ. ನಾವು ಹೊಸ ವರ್ಷವನ್ನು ಡಿಸೆಂಬರ್ 31ರ ರಾತ್ರಿ ಅಥವಾ ಜನವರಿ 1 ರಂದು ಆಚರಣೆ ಮಾಡುವುದಿಲ್ಲ. ನಾವು ಹೊಸ ವರ್ಷವನ್ನು ಹಿಂದೂ ಪಂಚಾಂಗದಂತೆ ಯುಗಾದಿಯಂದು ಆಚರಣೆಯನ್ನು ಮಾಡುವೆವು. ಜನವರಿ 1 ರಂದು ನಾವು ಯಾರಿಗೂ ಶುಭಾಶಯವನ್ನು ಕೋರುವುದಿಲ್ಲ. ಅದರ ಬದಲು ಯುಗಾದಿಯಂದು ಹೊಸ ವರ್ಷದ ಶುಭಾಶಯ ಹೇಳುವೆವು.

ನಾವು ನಮ್ಮ ಸ್ನೇಹಿತರಿಗೂ ಹಿಂದೂ ಹೊಸ ವರ್ಷದ ಯುಗಾದಿಯ ಬಗ್ಗೆ ತಿಳಿಸಿ ಧರ್ಮಜಾಗೃತಿ ಮಾಡುವೆವು. ನಾವು ನಮ್ಮ ಪ್ರಾಣ ಇರುವವರೆಗೆ ಆಭಿಮಾನದಿಂದ ನಮ್ಮ ಇತಿಹಾಸ, ಪರಂಪರೆ, ಆಚರಣೆಯನ್ನು ಪಾಲಿಸುವೆವು. ನಮ್ಮ ಪೂರ್ವಜರು ಹಾಕಿ ಕೊಟ್ಟ ಮಾರ್ಗದಲ್ಲಿ ಮುನ್ನಡೆಯುವೆವು’.
ಕೊನೆಯಲ್ಲಿ ಶ್ಲೋಕದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯವಾಯಿತು.

Comments are closed.