ಕರಾವಳಿ

ಬೀಜಾಡಿಯಲ್ಲಿ ಬಿಜೆಪಿ ಮುಖಂಡನ ಮನೆಗೆ ನುಗ್ಗಿ ಹಲ್ಲೆ: ಗ್ರಾ.ಪಂ ಚುನಾವಣಾ ಅಭ್ಯರ್ಥಿ ಆಸ್ಪತ್ರೆಗೆ ದಾಖಲು

Pinterest LinkedIn Tumblr

ಕುಂದಾಪುರ: ಈ ಬಾರಿಯ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಯೋರ್ವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ಇಲ್ಲಿನ ಕೋಟೇಶ್ವರದ ಸಮೀಪದ ಬೀಜಾಡಿಯಲ್ಲಿ ನಡೆದಿದೆ.

ಬೀಜಾಡಿ ಗ್ರಾ.ಪಂ ಮಾಜಿ ಸದಸ್ಯ, ಪ್ರಸ್ತುತ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಪ್ರಕಾಶ್ ಪೂಜಾರಿ ಹಲ್ಲೆಗೊಳಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೀಜಾಡಿ ನಿವಾಸಿಗಳಾದ ಜೋಗ ಪುತ್ರನ್, ಗಣೇಶ್ ಪುತ್ರನ್, ಪ್ರಕಾಶ್ ಪುತ್ರನ್ ಪ್ರಕರಣ ಆರೋಪಿಗಳಾಗಿದ್ದಾರೆ.

ಬಿಜೆಪಿ ಮುಖಂಡರಾಗಿ ಬೀಜಾಡಿ ಭಾಗದಲ್ಲಿ ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ಪ್ರಕಾಶ್ ಹಿಂದಿನ ಅವಧಿಯಲ್ಲೂ ಪಂಚಾಯತ್ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಬಹಿರಂಗ ಪ್ರಚಾರದ ಕೊನೆಯ ದಿನವಾದ ಶುಕ್ರವಾರ ಪ್ರಚಾರ ಕಾರ್ಯ ಮುಗಿಸಿ ಮನೆಗೆ ವಾಪಾಸಾಗಿದ್ದರು. ತಡರಾತ್ರಿ ಆರೋಪಿಗಳಾದ ಜೋಗ ಪುತ್ರನ್, ಗಣೇಶ್ ಪುತ್ರನ್, ಪ್ರಕಾಶ್ ಪುತ್ರನ್ ಏಕಾಏಕಿಯಾಗಿ ಪ್ರಕಾಶ್ ಪೂಜಾರಿಯವರ ಮನೆಗೆ ನುಗ್ಗಿ ದಾಂಧಲೆ ನಡೆಸಿ ಪ್ರಕಾಶ್ ಪೂಜಾರಿಯವರನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆಯಲ್ಲಿ ತಪ್ಪಿಸಲು ಬಂದ ಅವರ ಪತ್ನಿ ಜ್ಯೋತಿಯವರಿಗೂ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಕಾಶ್ ಪೂಜಾರಿ, ರಾಜಕೀಯ ದ್ವೇಷದಿಂದಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳ ಹಾಗೂ ನನ್ನ ಮಧ್ಯೆ ಏನು ಗಲಾಟೆ ನಡೆದಿಲ್ಲ. ಯಾವ ಕಾರಣಕ್ಕಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದಿಲ್ಲ. ನನ್ನ ವಾರ್ಡಿನಲ್ಲಿ ನನಗೆ ಜನಬೆಂಬಲ ಜಾಸ್ತಿ ಇರುವುದನ್ನು ಸಹಿಸದೇ ನನ್ನ ಮೇಲೆ ಸುಖಾಸುಮ್ಮನೆ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

ಪ್ರಕಾಶ್ ಪೂಜಾರಿಯವರ ಪತ್ನಿ ಕೊಟ್ಟಿರುವ ದೂರಿನ ಆಧಾರದಲ್ಲಿ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.