ಬೆಂಗಳೂರು: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಇಂದು (ಡಿ.24) ರಾತ್ರಿಯಿಂದ ರಾಜ್ಯ ಸರ್ಕಾರ ನೈಟ್ ಕರ್ಪ್ಯೂ ಜಾರಿಗೆ ಸಿದ್ಧತೆ ನಡೆಸಿತ್ತು. ಈ ಬಗ್ಗೆ ನಿನ್ನೆ ಅಧಿಕೃತ ಆದೇಶ ಕೂಡ ನೀಡಲಾಗಿತ್ತು. ಆದರೆ ಈ ನೈಟ್ ಕರ್ಫ್ಯೂಗೆ ಸಾರ್ವಜನಿಕರು ತೀವೃ ವಿರೋಧ ವ್ಯಕ್ತ ಪಡಿಸಿದ ಹಿನ್ನೆಲಯಲ್ಲಿ ರಾಜ್ಯ ಸರ್ಕಾರ ಇದೀಗ ನೈಟ್ ಕರ್ಪ್ಯೂ ಆದೇಶವನ್ನು ವಾಪಾಸ್ ಪಡೆದಿದೆ.
ಈ ಕುರಿತಂತೆ ಸಿ.ಎಂ ಬಿ.ಎಸ್ ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಪತ್ತೆಯಾದ ರೂಪಾಂತರ ಹೊಂದಿದ ಕೋವಿಡ್ ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ತಜ್ಞರ ಸಲಹೆಯ ಮೇರೆಗೆ ರಾತ್ರಿ ಕರ್ಫ್ಯೂ ವನ್ನು ಜಾರಿಗೆ ತರಲು ತೀರ್ಮಾನಿಸಲಾಗಿತ್ತು.
ಸರ್ಕಾರದ ಈ ತೀರ್ಮಾನದ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ರಾತ್ರಿ ಕರ್ಫ್ಯೂವಿನ ಅಗತ್ಯವಿಲ್ಲವೆಂಬಂತಹ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮರು ಪರಿಶೀಲಿಸಿ, ಸಂಪುಟ ಸಹೋದ್ಯೋಗಿಗಳ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕರ್ಫ್ಯೂ ಹಿಂಪಡೆಯಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು ಸ್ವಯಂ ನಿರ್ಭಂಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಅನಗತ್ಯವಾಗಿ ಸಂಚರಿಸದಂತೆ ಹಾಗೂ ಸರ್ಕಾರ ವಿಧಿಸಿದ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಈ ವೈರಾಣುವಿನ ಹರಡುವಿಕೆ ತಡೆಯಲು ಕೋರಿದ್ದಾರೆ.
ರಾಜ್ಯದಲ್ಲಿ ಇಂದು ರಾತ್ರಿಯಿಂದ ಜಾರಿಗೆ ಬರಲಿದ್ದ ನೈಟ್ ಕರ್ಪ್ಯೂ ಆದೇಶವನ್ನು ರಾಜ್ಯ ಸರ್ಕಾರ ವಾಪಾಸ್ ಪಡೆದಿದ್ದು ಹೊಸ ವರ್ಷಾಚರಣೆ ನಡೆಯುತ್ತೋ ಇಲ್ಲವೋ ಕಾದು ನೋಡಬೇಕಿದೆ.