
ಮಾಜಿ ಸಚಿವ, ಶಾಸಕ ಯು.ಟಿ.ಖಾದರ್
ಮಂಗಳೂರು : ಶಾಸಕ ಯು.ಟಿ.ಖಾದರ್ ಅವರ ಕಾರನ್ನು ಅಪರಿಚಿತರು ಬೈಕಿನಲ್ಲಿ ಬೆನ್ನಟ್ಟಿಕೊಂಡು ಬಂದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತನ ವಿಚಾರಣೆ ಬಳಿಕ ಪ್ರಕರಣ ತಿರುವು ಪಡೆದು ಕೊಂಡಿದೆ.
ಖಾದರ್ ಅವರು ಬುಧವಾರ ರಾತ್ರಿ 7.45ರ ಸುಮಾರಿಗೆ ದೇರಳಕಟ್ಟೆಯಲ್ಲಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ತೆರಳಲು ವಿಮಾನ ನಿಲ್ದಾಣದತ್ತ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ದೇರಳಕಟ್ಟೆ ಬಳಿ ಬೈಕೊಂದು ಎರಡು ಬಾರಿ ಅವರ ಕಾರಿನ ಸಮೀಪ ಅನುಮಾನಾಸ್ಪದ ರೀತಿಯಲ್ಲಿ ಹಾದು ಹೋಗಿತ್ತು. ಸುಮಾರು ಹತ್ತು ಕಿ.ಮೀ. ವರೆಗೂ ಖಾದರ್ ಅವರ ಕಾರಿನ ಹಿಂದೆ ಅಪರಿಚಿತರು ಬಂದಿದ್ದು, ಅನುಮಾನ ಬಂದು ಖಾದರ್ ಎಸ್ಕಾರ್ಟ್ ವಾಹನದ ಪೊಲೀಸರು ಬೈಕ್ ಸವಾರರನ್ನು ನಂತೂರು ಬಳಿ ನಿಲ್ಲಿಸುವಷ್ಟರಲ್ಲಿ ಅವರು ಪರಾರಿಯಾಗಿದ್ದರು.
ಬೆಂಗಾವಲು ಪೊಲೀಸರು ಬೈಕ್ ನ ನಂಬರ್ ನಮೂದಿಸಿಕೊಂಡು ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬೈಕ್ ಪತ್ತೆ ಹಚ್ಚಿ ಆತನ ಬಂಧಿಸಿ ವಿಚಾರಣೆಗೊಳಪಡಿಸಿದಾಗ ವಾಸ್ತವವಿಷಯ ಬಹಿರಂಗಗೊಂಡಿದೆ.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಗರದ ಬೋಳೂರು ಗ್ರಾಮದ ಉರ್ವಾ ನಿವಾಸಿ ಅನೀಶ್ ಪೂಜಾರಿ (28) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ವಾಸ್ತವಾಂಶ ಬಹಿರಂಗಗೊಂಡಿದೆ.
ಈತ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಹಾಗೆ ಸುಮ್ಮನೆ ಮಾಜಿ ಸಚಿವರನ್ನು ಹಿಂಬಾಲಿಸಿದ್ದ ಎನ್ನುವುದು ಬಹಿರಂಗವಾಗಿದೆ. ಬಂಧಿತ ಅರೋಪಿಯು ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಪುತ್ರ ಎನ್ನಲಾಗಿದೆ. ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ಈ ಯುವಕ ಕೇವಲ ತಮಾಷೆಗಾಗಿ ಖಾದರ್ ಅವರ ಬೈಕ್ ಹಿಂಬಾಲಿಸಿದ್ದಾನೆ ಎಂದು ತಿಳಿದು ಬಂದಿದೆ.
ಈತ ದೇರಳಕಟ್ಟೆಯಲ್ಲಿ ಕೆಲಸ ಮುಗಿಸಿ ಉರ್ವದ ಕಡೆಗೆ ತನ್ನ ಮನೆಗೆ ಬೈಕ್ ನಲ್ಲಿ ಬರುತ್ತಿದ್ದ. ಆದರೆ ಈತ ಸಚಿವರನ್ನು ಹಿಂಬಾಲಿಸಿಲ್ಲ. ಅವನಷ್ಟಕ್ಕೆ ಬರುತ್ತಿದ್ದ. ಬೇರೆ ಉದ್ದೇಶ ಇದ್ದಂತಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನನ್ನ ಕಾರನ್ನು ಬೈಕ್‌ನಲ್ಲಿ ಹಿಂಬಾಲಿಸುತ್ತಿದ್ದ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ. ಆದರೆ ಬೆಂಗಾವಲು ಪಡೆಯ ಅಧಿಕಾರಿಗಳು ಗಮನಿಸಿದ್ದರು. ನಂತೂರು ಬಳಿ ಬರುವಾಗ ಬೈಕನ್ನು ತಡೆದು ವಿಚಾರಿಸಲು ಮುಂದಾಗಿದ್ದು, ಅಷ್ಟರಲ್ಲಿ ಅವರು ತಪ್ಪಿಸಿಕೊಂಡರು ಎಂದು ಎಸ್ಕಾರ್ಟ್ ಸಿಬಂದಿ ತಿಳಿಸಿದ್ದಾರೆ. ಆಗಲೇ ಈ ವಿಚಾರ ನನ್ನ ಗಮನಕ್ಕೆ ಬಂದಿರುವುದು. ನನಗೆ ಜೀವ ಬೆದರಿಕೆ ಇದೆ ಎಂಬ ಕಾರಣದಿಂದಲೇ ಮುಖ್ಯಮಂತ್ರಿಗಳು ಹಾಗೂ ಗೃಹಸಚಿವರು ಬೆಂಗಾವಲು ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ, ಸದ್ಯಕ್ಕೆ ಯಾವುದೇ ಸಮಸ್ಯೆ ಆಗಲಿಲ್ಲ’ ಎಂದು ಮಾಜಿ ಸಚಿವ ಹಾಲಿ ಶಾಸಕ ಯು.ಟಿ.ಖಾದರ್ ಈ ಹಿಂದೆ ಮಾಧ್ಯಮಕ್ಕೆ ತಿಳಿಸಿದ್ದರು. ಇದೀಗ ಬಂಧಿತನ ಹೇಳಿಕೆ ಬಳಿಕ ಪ್ರಕರಣ ಸುಖಾಂತ್ಯ ಖಂಡಿದೆ ಎಂದು ಹೇಳಲಾಗಿದೆ.
Comments are closed.