ಕರಾವಳಿ

ಮಂಗಳೂರಿನ ಸದ್ಭಾವನಾ ವೇದಿಕೆಯಿಂದ ದೀಪಾವಳಿ, ಕ್ರಿಸ್ಮಸ್ ಹಾಗೂ ಈದ್ ಸೌಹಾರ್ದ ಕೂಟ

Pinterest LinkedIn Tumblr

ಮಂಗಳೂರು: ‘ಮಾನವೀಯತೆಯ ನೆಲೆಗಟ್ಟಿನಲ್ಲಿ ನಮ್ಮ ಬದುಕು ರೂಪಿಸಲ್ಪಡಬೇಕು. ಸಮಾಜದಲ್ಲಿ ಮತ-ಧರ್ಮ ನಮ್ಮ ಅನುಕೂಲಕ್ಕಾಗಿ ಮಾಡಿದ್ದು. ಸಮಷ್ಟಿಯಲ್ಲಿ ನಮ್ಮದು ಮಾನವ ಸಮುದಾಯ. ನಾವು ಮಾನವ ಕುಲ ಒಂದೇ ಎಂಬ ವಿಚಾರಕ್ಕೆ ಒತ್ತು ನೀಡಬೇಕು. ಹಬ್ಬಗಳ ಆಚರಣೆಯ ತತ್ವವು ಇದೇ ಆಗಿದೆ’ ಎಂದು ಕರ್ನಾಟಕ ಜಾನಪದ – ಯಕ್ಷಗಾನ ಅಕಾಡೆಮಿ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.

ಸದ್ಭಾವನಾ ವೇದಿಕೆ ಜಪ್ಪು ವರ್ತುಲ ವತಿಯಿಂದ ನಗರದ ಮಾರ್ಗನ್ ಗೇಟ್ ನಲ್ಲಿರುವ ಕಾಸಿಯಾ ಚರ್ಚ್ ಸಭಾಂಗಣದಲ್ಲಿ ರವಿವಾರ ನಡೆದ ಆರನೇ ವರ್ಷದ ದೀಪಾವಳಿ, ಕ್ರಿಸ್ಮಸ್ ಹಾಗೂ ಈದ್ ಸೌಹಾರ್ದ ಕೂಟದಲ್ಲಿ ದೀಪಾವಳಿ ಸಂದೇಶ ನೀಡಿ ಅವರು ಮಾತನಾಡಿದರು.

ವಿಶ್ವಮಾನವ ತತ್ವ ಬೆಳೆಸಿಕೊಳ್ಳಿ:

‘ ಎಲ್ಲರೂ ಒಂದೇ ಎಂಬ ಭಾವನೆಯಿಂದ ಪ್ರತಿಯೊಬ್ಬರೂ ಬದುಕಬೇಕಿದೆ. ಇದು ಎಲ್ಲ ಧರ್ಮಗಳ ತಿರುಳಾಗಿದೆ. ನಾವು ಅನಿಕೇತನರಾಗಬೇಕು. ವಿಶ್ವಮಾನವ ತತ್ವವನ್ನು ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ತಾನು ತನ್ನದು ಎಂಬ ಭಾವ ತೊರೆದು ವಿಶ್ವದ ಕಡೆಗೆ ದೃಷ್ಟಿಯಿಡಬೇಕು’ ಎಂದವರು ನುಡಿದರು.

ಮಂಗಳೂರಿನ ಮಾರ್ಗನ್ ಗೇಟ್ ಪ್ಯಾರಿಸ್ ಪ್ರೀಸ್ಟ್ ಆಫ್ ಕಾಸಿಯಾ ಚರ್ಚಿನ ವಂ| ಎರಿಕ್ ಕ್ರಾಸ್ತಾ, ಶಾಂತಿ ಪ್ರಕಾಶನ ಮಂಗಳೂರು ಇದರ ವ್ಯವಸ್ಥಾಪಕ ಜ| ಮುಹಮ್ಮದ್ ಕುಂಞಿ ಕ್ರಿಸ್ಮಸ್ ಮತ್ತು ಈದ್ ಸಂದೇಶ ನೀಡಿದರು. ಲ| ಓಸ್ವಾಲ್ಡ್ ಪಿಂಟೋ, ಕಾರ್ಪೊರೇಟರ್ ಭಾನುಮತಿ ಮತ್ತಿತರರು ಉಪಸ್ಥಿತರಿದ್ದರು.

ಸೌಹಾರ್ದ ವೇದಿಕೆಯ ಅಧ್ಯಕ್ಷ ದಿವಾಣ ಕೇಶವಭಟ್ಟ ಪ್ರಸ್ತಾವಿಸಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜ| ಸಾಲೆಹ್ ಮುಹಮ್ಮದ್ ವಂದಿಸಿದರು. ಮಂಗಳಾ ಜೋಶಿ, ಗುಲಾಬಿ ತಾವ್ರೊ ಮತ್ತು ಮುಝಾಹಿರ್ ಅಹಮದ್ ಸೌಹಾರ್ದ ಪ್ರಾರ್ಥನೆ ನೆರವೇರಿಸಿದರು. ಜ| ಬಿ.ಎ. ಮುಹಮ್ಮದ್ ಆಲಿ ಕಾರ್ಯಕ್ರಮ ನಿರೂಪಿಸಿದರು.

Comments are closed.