ಕರಾವಳಿ

ಸರ್ಕಾರಿ ನೌಕರರು ನಿರ್ಲಕ್ಷ್ಯ ತೋರದೆ ಕಾನೂನಿನ ವ್ಯಾಪ್ತಿಯಡಿ ಕಾರ್ಯನಿರ್ವಹಿಸಬೇಕು – ಬಿ.ಎಸ್.ಪಾಟೀಲ್

Pinterest LinkedIn Tumblr

ಮಂಗಳೂರು, ಡಿಸೆಂಬರ್ 19 : ಸರ್ಕಾರಿ ಕಛೇರಿಗಳಲ್ಲಿ ಸರ್ಕಾರಿ ನೌಕರರು ಸಾರ್ವಜನಿಕರ ಸಮಸ್ಯೆ ಹಾಗೂ ಕೆಲಸ ಕಾರ್ಯಗಳಲ್ಲಿ ನಿರ್ಲಕ್ಷ್ಯ ಮನೋಭಾವವನ್ನು ತೋರದೆ ಕಾನೂನಿನ ವ್ಯಾಪ್ತಿಯಲ್ಲಿ ಇದ್ದರೆ ಅವುಗಳನ್ನು ವಿಳಂಬವಿಲ್ಲದೆ ಮಾಡಿಕೊಡಬೇಕೆಂದು ಉಪಲೋಕಾಯುಕ್ತ ಬಿ.ಎಸ್.ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜನ ಸಾಮಾನ್ಯರು ಹಲವು ಸಮಸ್ಯೆಗಳನ್ನು ಕೋರಿ ಅರ್ಜಿಗಳನ್ನು ಸಲ್ಲಿಸುತ್ತಾರೆ. ಸರ್ಕಾರಿ ನೌಕಕರು ಇವುಗಳನ್ನು ತಮ್ಮ ಕೆಲಸವೆಂದು ಅರಿತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದಲ್ಲಿ ಅವುಗಳ ಆದ್ಯತೆ ಮೇಲೆ ನಂತರದಲ್ಲಿ ವೈಯಕ್ತಿಕ ಸಮಸ್ಯೆಗಳನ್ನು ಕಾನೂನಿನ ವ್ಯಾಪ್ತಿಯಲ್ಲಿ ಬಗೆಹರಿಸಲು ತಿಳಿಸಿದರು.
ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಯಾವುದೇ ಚೌಕಟ್ಟಿಗೆ ಸೀಮಿತವಾಗದೆ, ರಾಜಕೀಯ ಒತ್ತಡಕ್ಕೆ ಮಣಿಯದೆ, ಆಮಿಷಕ್ಕೆ ಒಳಗಾಗದೆ ಶಿಸ್ತು, ಪ್ರಾಮಾಣಿಕತೆಯ ಜೊತೆಗೆ ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಪಂಚಾಯತ್ ರಾಜ್ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಸಂಬಂಧಿಸಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವೆಡೆಗೆ ಹೆಚ್ಚು ಒತ್ತು ಕೊಡಬೇಕು ಎಂದರು.

ಗ್ರಾಮೀಣ ಭಾಗದಲ್ಲಿ ಅತಿವೃಷ್ಠಿಯಿಂದಾಗಿ ರಸ್ತೆಗಳು ಹಾಳಾಗಿವೆ. ಅವುಗಳ ದುರಸ್ಥಿ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದ ಅವರು ಗ್ರಾಮ ಪಂಚಾಯತ್‍ಗಳಲ್ಲಿ ಲೆಕ್ಕ ಪರಿಶೋಧಕರು ಸಲ್ಲಿಸರುವ ಆಕ್ಷೇಪಣೆಗಳು ಇದ್ದ ಬಗ್ಗೆ ಪಿ.ಡಿಓ ವಿರುದ್ದ ದೂರುಗಳಿವೆ. ಇವುಗಳನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಪರಿಶೀಲಿಸಿ ಅವುಗಳನ್ನು ಸರಿಪಡಿಸಿ ವರದಿ ನೀಡುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಯಾವುದೇ ರೀತಿ ಪರವಾನಗಿ ಪಡೆಯದೇ ಗಣಿಗಾರಿಕೆ ನಡೆಯುತ್ತಿದೆ ಎಂಬ ದೂರುಗಳು ಬಂದಿವೆ, ಗಣಿ ಮತ್ತು ಭೂ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ತೆಗೆದುಕೊಂಡ ಕ್ರಮಗಳ ವರದಿಯನ್ನು ನೀಡಬೇಕೆಂದು ಸೂಚನೆ ನೀಡಿದರು.

ಕೋವಿಡ್ ಹರಡುವಿಕೆ ನಿಯಮಾವಳಿಗಳನ್ನು ಅಧಿಕಾರಿಗಳು ಚಾಚು ತಪ್ಪದೇ ಪಾಲಿಸಬೇಕು. ಅದನ್ನು ಸಾರ್ವಜನಿಕರು ಅನುಸರಿಸುವ ರೀತಿಯಲ್ಲಿ ಮಾದರಿಯಾಗಬೇಕು ಎಂದರು.

ಪಂಚಾಯತ್ ರಾಜ್ ಕಾಯ್ದೆಯಡಿ ಮನೆಗಳ ಖಾತೆಯಿರಿಸುವುದು, ಮನೆ ನಿರ್ಮಾಣಕ್ಕೆ ಪರವಾನಗಿ ಪಡೆಯುವುದು, ಜಾಗದ ಒತ್ತುವರಿ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸೇರಿದಂತೆ 99ಸಿಸಿ ಅಡಿಯಲ್ಲಿ ಅನರ್ಹರಿಗೆ ಮಂಜೂರಾತಿ ನೀಡಲಾಗುತ್ತದೆ ಎಂದು ದೂರಿನ ಪ್ರಕರಣಗಳು ಹೆಚ್ಚು ಬಂದಿವೆ. ಇವುಗಳನ್ನು ತಮ್ಮ ಕಛೇರಿಯ ಹಂತದಲ್ಲಿಯೇ ಕೂಲಂಕುಶವಾಗಿ ಪರಿಶೀಲಿಸಿ ಬಗೆಹರಿಸಿ ವರದಿ ನೀಡಬೇಕೆಂದು ತಿಳಿಸಿದರು.

ಜಿಲ್ಲೆಯಲ್ಲಿ ಪ್ರತಿಯೊಬ್ಬರು ಶೌಚಾಲಯವನ್ನು ಬಳಸುವಂತೆ ಅರಿವು ಮೂಡಿಸಬೇಕು ಎಂದ ಅವರು ಜಿಲ್ಲೆಯಲ್ಲಿ ಈವರೆಗೆ ಸ್ವಚ್ಛ ಭಾರತ ಯೋಜನೆಯಡಿ ಸೇರಿದಂತೆ ಮತ್ತಿತರ ಯೋಜನೆಗಳ ಅಡಿಯಲ್ಲಿ ನಿರ್ಮಿಸಲಾಗಿರುವ ಶೌಚಾಲಯಗಳ ಬಳಕೆ, ಸಂಖ್ಯೆಯ ವರದಿಯನ್ನು ನೀಡಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಉಪ ಅರಣ್ಯ ಸಂರಕ್ಷಣಾಧಿüಕಾರಿ ವಿ ಕರಿಕಲಂ, ಐಎಎಸ್ ಪ್ರೊಬೆಷನರಿ ಅಧಿಕಾರಿ ಮೋನ್ಹಾ ರೋತ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Comments are closed.