ಕರ್ನಾಟಕ

ಹತ್ರಾಸ್ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ; ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐ -ನಾಲ್ವರ ಹೆಸರು ಉಲ್ಲೇಖ

Pinterest LinkedIn Tumblr

ಲಖನೌ: ಹತ್ರಾಸ್ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಇಂದು ವಿಶೇಷ ಎಸ್ ಸಿ/ಎಸ್ ಟಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಆರೋಪ ಪಟ್ಟಿಯಲ್ಲಿ, ನಾಲ್ವರು ಆರೋಪಿಗಳು ಅತ್ಯಾಚಾರ ನಡೆಸಿ, ಕೊಲೆ ನಡೆಸಿದ್ದಾರೆ ಎಂಬುದಾಗಿ ತಿಳಿಸಿದೆ.

ಉತ್ತರಪ್ರದೇಶದ ಹತ್ರಾಸ್ ಎಂಬಲ್ಲಿ ಯುವತಿಯೋರ್ವಳನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈಯಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಿಬಿಐ ವರದಿ ಸಲ್ಲಿಸಿದೆ. ಪ್ರಕರಣ ನಡೆದು ಮೂರು ತಿಂಗಳಾದ ಬಳಿಕ ಸಿಬಿಐ ಈ ಕುರಿತು ಚಾರ್ಜ್ ಶೀಟ್ ಸಲ್ಲಿಸಿದ್ದು, ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈಯಲಾಗಿದೆ ಎಂದು ಚಾರ್ಜ್ ಶೀಟ್ ನಲ್ಲಿ ಆರೋಪಿಸಲಾಗಿದೆ.

ಸಂದೀಪ್, ಲವ್ಕುಶ್, ರವಿ ಮತ್ತು ರಾಮು ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಗಳನ್ನು ಹೊರಿಸಲಾಗಿದೆ. ಸೆಪ್ಟೆಂಬರ್ 14ರಂದು ಹತ್ರಾಸ್ ನಲ್ಲಿ ದಲಿತ ಮಹಿಳೆ ಮೇಲೆ ಮೇಲ್ಜಾತಿಯ ನಾಲ್ವರು ಪುರುಷರು ಅತ್ಯಾಚಾರ ಎಸಗಿದ್ದರು. ಚಿಕಿತ್ಸೆ ವೇಳೆ ಸೆಪ್ಟೆಂಬರ್ 29ರಂದು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಯುವತಿ ಮೃತಪಟ್ಟಿದ್ದರು.

ಸೆಪ್ಟೆಂಬರ್ 30ರಂದು ಸಂತ್ರಸ್ತೆಯನ್ನು ಆಕೆಯ ಮನೆಯ ಬಳಿ ರಾತ್ರಿ ಶವಸಂಸ್ಕಾರ ಮಾಡಲಾಗಿತ್ತು. ಸ್ಥಳೀಯ ಪೊಲೀಸರು ಆಕೆಯ ಅಂತಿಮ ವಿಧಿವಿಧಾನಗಳನ್ನು ತರಾತುರಿಯಲ್ಲಿ ನಡೆಸುವಂತೆ ಬಲವಂತ ಮಾಡಿದ್ದಾರೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. ಆದರೆ, ಸ್ಥಳೀಯ ಪೊಲೀಸ್ ಅಧಿಕಾರಿಗಳು, ಕುಟುಂಬದ ಇಚ್ಛೆಯಂತೆ ಶವವನ್ನು ಸಾಗಿಸಲಾಯಿತು ಎಂದು ಪ್ರತಿಕ್ರಿಯೆ ನೀಡಿದ್ದರು.

ಈ ಪ್ರಕರಣ ಉತ್ತರ ಪ್ರದೇಶ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ತೀವ್ರ ಪ್ರತಿಭಟನೆ ಬಳಿಕ ಈ ಪ್ರಕರಣದ ತನಿಖಾ ಮೇಲ್ವಿಚಾರಣೆಯನ್ನು ಸಿಬಿಐಗೆ ವಹಿಸಲಾಗಿತ್ತು.

ಇದೀಗ ಯುವತಿಯನ್ನು ದಾಖಲಿಸಲಾಗಿದ್ದ ಆಸ್ಪತ್ರೆಯ ವೈದ್ಯರ ಹೇಳಿಕೆಗಳನ್ನೂ ಪಡೆದು, ಫೊರೆನ್ಸಿಕ್ ಪರೀಕ್ಷೆಗಳನ್ನೂ (ವಿಧಿ ವಿಜ್ಞಾನ ಪ್ರಯೋಗಾಲಯ) ನಡೆಸಿರುವ ತನಿಖಾ ತಂಡವು ದೆಹಲಿಯಿಂದ 200ಕಿ.ಮೀ ದೂರದಲ್ಲಿರುವ ಹತ್ರಾಸ್ ನ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ.

ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ/ಪಂಗಡ ದೌಜರ್ನ್ಯ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಲಾಗಿದ್ದು, ಚಾರ್ಜ್ ಶೀಟ್ ನಲ್ಲಿ ಸಂದೀಪ್, ಲವಕುಶ್, ರವಿ ಮತ್ತು ರಾಮು ಎಂಬುವವರ ಹೆಸರು ಉಲ್ಲೇಖಿಸಲಾಗಿದೆ.

ಸದ್ಯ ಆರೋಪಿ ಸಂದೀಪ್, ಲವ್ಕುಶ್, ರವಿ ಮತ್ತು ರಾಮು ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರನ್ನು ಗಾಂಧಿನಗರದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವಿವಿಧ ವಿಧಿವಿಜ್ಞಾನ ಪರೀಕ್ಷೆಗಳನ್ನು ಸಹ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Comments are closed.