ಕರಾವಳಿ

ಕರ್ತವ್ಯನಿರತ ಹೆಡ್‌ಕಾನ್‌ಸ್ಟೆಬಲ್‌ ಮೇಲಿನ ಹಲ್ಲೆ ಪ್ರಕರಣ : ಇಬ್ಬರು ಪೊಲೀಸ್ ವಶಕ್ಕೆ

Pinterest LinkedIn Tumblr

ಮಂಗಳೂರು, ಡಿಸೆಂಬರ್.18: ನಗರದಲ್ಲಿ ಕರ್ತವ್ಯನಿರತರಾಗಿದ್ದ ಪೊಲೀಸ್‌ ಹೆಡ್‌ಕಾನ್‌ಸ್ಟೆಬಲ್‌ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ನಗರದ ನ್ಯೂಚಿತ್ರ ಟಾಕೀಸ್ ಮುಂಭಾಗ ಕರ್ತವ್ಯನಿರತರಾಗಿದ್ದ ಬಂದರು ಠಾಣೆಯ ಹೆಡ್ ಕಾನ್‌ಸ್ಟೇಬಲ್ ಗಣೇಶ್ ಕಾಮತ್ (43) ಅವರಿಗೆ ಬುಧವಾರ ಅಪರಾಹ್ನ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರ ದಿಂದ ಹಲ್ಲೆಗೈದು ಪರಾರಿಯಾಗಿದ್ದರು.

ಮಂಗಳೂರು ಉತ್ತರ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್‌ ಗಣೇಶ್‌ ಕಾಮತ್‌ ಅವರು ನಗರದ ರಥಬೀದಿ ಬಳಿ ನ್ಯೂಚಿತ್ರ ಟಾಕೀಸ್ ಮುಂಭಾಗದಲ್ಲಿ ಇಬ್ಬರು ಮಹಿಳಾ ಸಿಬಂದಿಗಳ ಜೊತೆ ಇಲ್ಲಿನ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನೆಡೆಸುತ್ತಿದ್ದರು.

ಈ ಸಂದರ್ಭ ಇಬ್ಬರು ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಹಿಂಬದಿ ಸವಾರ ವಾಹನದಿಂದ ಇಳಿದು ಒಂದಷ್ಟು ದೂರ ನಡೆದುಕೊಂಡು ಬಂದು ಹೊಂಚು ಹಾಕಿ ಗಣೇಶ್ ಕಾಮತ್ ಅವರ ಕೈಗೆ ಏಕಾಏಕಿ ಇರಿದಿದ್ದಾನೆ. ತಕ್ಷಣ ಓಡಿ ಹೋಗಿ ಆತನಿಗಾಗಿ ಕಾಯುತ್ತಿದ್ದ ದ್ವಿಚಕ್ರ ವಾಹನ ಏರಿ ಪರಾರಿಯಾಗಿದ್ದಾನೆ.

ಹಲ್ಲೆಯಿಂದ ಗಣೇಶ್‌ ಕಾಮತ್‌ ಅವರ ಬಲಕೈಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ ಗಣೇಶ್ ಕಾಮತ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆರೋಪಿಗಳಿಬ್ಬರು ದ್ವಿಚಕ್ರ ವಾಹನದಲ್ಲಿ ಬರುವುದು, ಚೆಕ್‌ಪೋಸ್ಟ್‌ನಿಂದ ಒಂದಷ್ಟು ದೂರದಲ್ಲಿ ನಿಲ್ಲಿಸುವುದು, ಹಿಂಬದಿ ಸವಾರ ಕೃತ್ಯ ಎಸಗಲು ತೆರಳುತ್ತಿರುವುದು, ಕೃತ್ಯ ಎಸಗುವುದು ಬಳಿಕ ಬಂದ ರಸ್ತೆಯಲ್ಲೇ ಹಿಂದಕ್ಕೆ ಹೋಗುತ್ತಿರುವುದು ಎಲ್ಲವು ಘಟನಾ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದರ ಅಧಾರದಲ್ಲಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ತನಿಖೆ ಹಂತದಲ್ಲಿ ಇರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

Comments are closed.