ಕುಂದಾಪುರ: ಕೊರೊನಾ ನಂತರದ ಜೀವನಕ್ಕೆ ಆಧಾರವಾಗಿ ನೂರಾರು ಮಂದಿ ಪಂಜರಕೃಷಿ ಮೀನುಗಾರಿಕೆಯಲ್ಲಿ ತೊಡಗಿಕೊಂಡರೆ ಈಗ ಅದುವೇ ಆಘಾತ ನೀಡುತ್ತಿದೆ. ತಲಾ 2 ಸಾವಿರದಂತೆ ಮೀನು ಮರಿಗಳಿದ್ದ 115ರಷ್ಟು ಪಂಜರಗಳಲ್ಲಿದ್ದ 1 ಲಕ್ಷಕ್ಕೂ ಅಧಿಕ ಮೀನುಗಳು ಸಾವಿಗೀಡಾಗಿವೆ ಎಂಬ ಆತಂಕವಿದೆ. ಇದಕ್ಕೆಲ್ಲ ಈಚೆಗೆ ಸಮುದ್ರದ ನೀರಿನ ಬಣ್ಣ ಬದಲಾದುದೇ ಕಾರಣ ಎಂಬ ಅನುಮಾನವೂ ಇದೆ.

ಏನಿದು ಪಂಜರ ಕೃಷಿ
ಆತ್ಮನಿರ್ಭರ ಭಾರತ ಯೋಜನೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೀನುಗಾರಿಕಾ ಇಲಾಖೆ ಕೈಗೊಂಡ ಪಂಜರ ಕೃಷಿ ಮೀನುಗಾರಿಕೆಗೆ ಸಬ್ಸಿಡಿಗೆ 1 ಸಾವಿರಕ್ಕೂ ಮಿಕ್ಕಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಮನೆಸಮೀಪ, ಪ್ರತ್ಯೇಕ ಕೊಳ ಇಲ್ಲದೇ ಕಡಿಮೆ ಖರ್ಚಿನಲ್ಲಿ, ಸ್ಥಳೀಯ ಮೀನನ್ನೇ ಆಹಾರವಾಗಿ ಬಳಸಿ ಪಂಜರ ಕೃಷಿ ಮೀನುಗಾರಿಕೆ ಮಾಡಬಹುದಾಗಿದ್ದು 20*10 ಅಡಿಯ ಗೂಡಿನಲ್ಲಿ ಮೀನುಗಳನ್ನು ಸಾಕುವುದೇ ಪಂಜರ ಕೃಷಿ. ಮೀನಿನ ಮರಿ ಖರೀದಿ, ಗೂಡು, ಮೀನಿಗೆ ಆಹಾರ, ಕೂಲಿ ಇತ್ಯಾದಿ ಸೇರಿ 1500 ಮೀನಿಗೆ 2.85 ಲಕ್ಷ ರೂ. ಖರ್ಚಾಗುತ್ತದೆ. ಬಲಿತ ಮೀನು ತಲಾ 1 ಕೆಜಿ ತೂಗಿದರೂ 400 ರೂ. ಧಾರಣೆಯಂತೆ ೩೦೦ ಮೀನುಗಳ ಲೆಕ್ಕ ಬಿಟ್ಟು 1200ಕೆಜಿಗೆ 4.80 ಲಕ್ಷ ರೂ. ಆದಾಯ ಬರುತ್ತದೆ. ಬಲಿತ ಮೀನು 3ರಿಂದ 4 ಕೆಜಿವರೆಗೆ ಬರುವ ಕಾರಣ 12 ಲಕ್ಷ ರೂ.ಗೂ ಹೆಚ್ಚು ಆದಾಯ ಬರುವ ನಿರೀಕ್ಷೆಯಲ್ಲಿ ಮೀನುಗಾರರಿದ್ದರು.
ಇಲ್ಲಿನ ಪಂಚಗಂಗಾವಳಿಯಲ್ಲಿ 115ಕ್ಕೂ ಅಧಿಕ ಗೂಡುಗಳಲ್ಲಿ ಮೀನು ಸಾಕಲಾಗುತ್ತಿದೆ. ಪ್ರತಿ ಪಂಜರದಲ್ಲೂ ತಲಾ ೨ ಸಾವಿರದಷ್ಟು ಮೀನಿದೆ. ಮೀನು ಗಾತ್ರದಲ್ಲಿ ಬಲಿತಂತೆ ಅದನ್ನು ಪ್ರತ್ಯೇಕಿಸಿ ಮಾರಾಟ ಮಾಡಲಾಗುತ್ತದೆ.
ಭಾಗಶಃ 60 ಶೇ.ದಷ್ಟು ಮೀನುಗಳು ಸಾವಿಗೀಡಾಗುತ್ತಿವೆ ಎನ್ನುತ್ತಾರೆ ಕುಮಾರ ಖಾರ್ವಿ. ಸಾವಿಗೀಡಾದ ಮೀನನ್ನು ಪ್ರತ್ಯೇಕಿಸಿ ನೀರಿನಿಂದ ಹೊರತಂದು ಹೂಳಲಾಗುತ್ತಿದೆ ಎನ್ನುತ್ತಾರೆ ರವಿರಾಜ ಖಾರ್ವಿ. ಪ್ರತಿದಿನ ಎಂಬಂತೆ ಮೀನುಗಳು ಸಾಯುತ್ತಿದ್ದು ಲೆಕ್ಕಕ್ಕೆ ದೊರೆಯುತ್ತಿಲ್ಲ ಎನ್ನುತ್ತಾರೆ ಸಂತೋಷ್ ಖಾರ್ವಿ. ಮೀನುಗಾರಿಕಾ ಇಲಾಖೆ ಇದಕ್ಕೆ ಪರಿಹಾರ ನೀಡಬೇಕೆನ್ನುತ್ತಾರೆ ಅನಿಲ್ ಖಾರ್ವಿ. ಕೊಳಚೆ ನೀರು ಹೊಳೆಗೆ ಸೇರುವುದೇ ಮೀನುಗಳು ಸಾಯಲು ಕಾರಣ ಎನ್ನುತ್ತಾರೆ ಶಂಕರ ಖಾರ್ವಿ. ತ್ಯಾಜ್ಯ ಸೇರದಂತೆ ಕಟ್ಟುನಿಟ್ಟು ಮಾಡಬೇಕು ಎನ್ನುತ್ತಾರೆ ಸದಾಶಿವ ಖಾರ್ವಿ ಹಾಗೂ ಪ್ರವೀಣ್ ಖಾರ್ವಿ.ಮೀನುಗಾರಿಕಾ ಇಲಾಖೆ ಅಧಿಕಾರಿ ಹೇಮಲತಾ ಭೇಟಿ ನೀಡಿ ಹಾನಿಯ ಸಮೀಕ್ಷೆ ನಡೆಸಿದ್ದಾರೆ. ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಪರಿಣತರು ಭೇಟಿ ನೀಡಿ ಪರಿಶೀಲಿಸಿ ಸಮುದ್ರದ ನೀರು ಬಣ್ಣ ಬದಲಾದ ಕಾರಣ ಇಂತಹ ಅವಾಂತರ ನಡೆದಿದೆಯೇ ಎಂದು ಅವರು ಪರಿಶೀಲಿಸಿ ತಿಳಿಸಲಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಸಮುದ್ರದ ನೀರಿನ ಬಣ್ಣ ಬದಲಾದುದೇ ಕಾರಣ ಎನ್ನುವುದು ಪರಿಣತರ ಅಭಿಪ್ರಾಯ.
ಪ್ರಸ್ತಾವ ಕಳುಹಿಸಲಾಗುವುದು
ಮೀನುಗಳ ಸಾವು ಗಮನಕ್ಕೆ ಬಂದಿದ್ದು ಇಲಾಖೆಯಿಂದ ಸಮೀಕ್ಷೆ ಮಾಡಲಾಗಿದೆ. ಪರಿಹಾರ್‍ಕಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು. ಈವರೆಗೆ ಇಂತಹ ದುರ್ಘಟನೆ ನಡೆಯದ ಕಾರಣ ಯಾವ ರೀತಿಯ ಪರಿಹಾರ ನೀಡಬೇಕೆಂದು ಇಲಾಖೆಯಿಂದ ಸೂಚನೆ ಬರಬೇಕಿದೆ. ಮೀನುಗಾರಿಕೆಗೆ ತೆರಳಿದಾಗ ಅವಘಡ ಸಂಭವಿಸಿದರೆ ಮಾತ್ರ ಪರಿಹಾರ ನೀಡಲು ಸದ್ಯ ಅವಕಾಶ ಇದೆ. ಈ ಹಿಂದೆ ಸಿಗಡಿ ಕೃಷಿ ನಾಶವಾದಾಗಲೂ ಪರಿಹಾರಕ್ಕೆ ಅವಕಾಶ ಇರಲಿಲ್ಲ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಸಲು ಮನವಿ ಮಾಡಲಾಗಿದೆ.
-ಗಣೇಶ್ (ಉಪನಿರ್ದೇಶರು, ಮೀನುಗಾರಿಕಾ ಇಲಾಖೆ, ಉಡುಪಿ)
Comments are closed.