ಕರಾವಳಿ

ವರ್ಚುವಲ್ ಮೂಲಕ ‘ಗೋ ಕೊರೊನಾ ಗೋ’ ಪುಸ್ತಕ ಉದ್ಘಾಟಿಸಿದ ಬಾಲಿವುಡ್ ನಟ ಸೋನು ಸೂದ್

Pinterest LinkedIn Tumblr

ಕುಂದಾಪುರ: ನಾನು ಚಿತ್ರೀಕರಣದಲ್ಲಿ ಇರೋದರಿಂದ ಕುಂದಾಪುರದಲ್ಲಿ ನಡೆಯುತ್ತಿರುವ ಕಾರ್ಟೂನ್‌ ಹಬ್ಬದಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ. ಆದರೆ ನನ್ನ ಸಹೋದರ ವ್ಯಂಗ್ಯಚಿತ್ರಕಾರ ಸತೀಶ್‌ ಆಚಾರ್ಯ ಅವರು ರಚಿಸಿದ ‘ಗೋ ಕೊರೊನಾ ಗೋ’ ಪುಸ್ತಕ ಬಿಡುಗಡೆ ಮಾಡಲು ಸಂತೋಷವಾಗುತ್ತದೆ. ಮುಂದಿನ ವರ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸುತ್ತೇನೆ ಎಂದು ಪ್ರಸಿದ್ಧ ಚಲನಚಿತ್ರ ನಟ ಹಾಗೂ ಕೊರೊನಾ ಯೋಧ ಸೋನು ಸೂದ್‌ ಹೇಳಿದ್ದಾರೆ.

ಇಲ್ಲಿನ ಸರ್ಕಾರಿ ಜ್ಯೂನಿಯರ್‌ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಶನಿವಾರ ಆರಂಭಗೊಂಡ ’ಕಾರ್ಟೂನ್‌ ಹಬ್ಬ–2020’ ರ ಉದ್ಘಾಟನೆಯ ಅಂಗವಾಗಿ ವ್ಯಂಗ್ಯ ಚಿತ್ರಕಾರ ಸತೀಶ್‌ ಆಚಾರ್ಯ ಅವರ ಸಂಗ್ರಹದ ’ಗೋ ಕೊರೊನಾ ಗೋ’ ಪುಸ್ತಕವನ್ನು ಮುಂಬೈಯಿಂದ ವಿಡಿಯೋ ಮೂಲಕ ಉದ್ಘಾಟಿಸಿ ಕಳುಹಿಸಿದ ವಿಡಿಯೋ ಸಂದೇಶದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕುಂದಾಪುರದ ಕಂದಾಯ ಉಪವಿಭಾಗಾಧಿಕಾರಿ ಕೆ.ರಾಜು ಅವರು, ವ್ಯಂಗ್ಯ ಚಿತ್ರಗಳು ಸಾಮಾಜಿಕ ಮೌಲ್ಯದ ಸಂದೇಶಗಳನ್ನು ಸಮಾಜಕ್ಕೆ ನೀಡುತ್ತದೆ. ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ನಿಜವಾದ ಕೊರೊನಾ ವಾರಿಯರ್ಸ್‌ಗಳಾಗಿದ್ದಾರೆ. ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ನಿಜವಾದ ಕೊರೊನಾ ವಾರಿಯರ್ಸ್‌ಗಳಾಗಿದ್ದಾರೆ. ಹೊರ ರಾಜ್ಯದ ಬಂಧುಗಳು ಜಿಲ್ಲೆಗೆ ಬಂದಾಗಲೂ ಬಂದಂತಹ ಸಮಸ್ಯೆಗಳನ್ನು ಎದುರಿಸುವ ಸನ್ನಿವೇಶಗಳಲ್ಲಿ ಸರ್ಕಾರಿ, ಸಾರ್ವಜನಿಕ ಹಾಗೂ ಸಂಘ–ಸಂಸ್ಥೆಗಳ ಸಹಕಾರ ಉಲ್ಲೇಖನೀಯ. ಡಾ.ನಾಗೇಶ್‌ ಹಾಗೂ ಡಾ.ನಾಗಭೂಷಣ ಉಡುಪ ಅವರು ಕೊರೊನಾ ಸಂಕಷ್ಟ ದಿನಗಳಲ್ಲಿ ತೋರಿದ ಕಾರ್ಯವೈಖರಿ ಅಭಿನಂದನೀಯ. ಕೋವಿಡ್‌ ಆಸ್ಪತ್ರೆಯ ಸಿದ್ಧಪಡಿಸುವ ಸಂದರ್ಭದಲ್ಲಿ ಆಶಾ ಎನ್ನುವ ದಾದಿಯೊಬ್ಬರು ರೋಗಿಗೆ ಅವಶ್ಯಕವಾಗಿರುವ ಮಂಚವನ್ನು ತಾವೇ ಹೊತ್ತುಕೊಂಡು ಬರುವ ಮೂಲಕ ಕರ್ತವ್ಯ ದಕ್ಷತೆ ತೋರಿರುವುದು ಉಲ್ಲೇಖನೀಯ ಎಂದರು.

ಕಾರ್ಟೂನ್‌ ಹಬ್ಬದ ಸಂಘಟಕ ಸತೀಶ್‌ ಆಚಾರ್ಯ. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ. ಕುಂದಾಪುರದ ಸರ್ಕಾರಿ ಕೋವಿಡ್‌ ಆಸ್ಪತ್ರೆಯ ನೋಡಲ್‌ ವೈದ್ಯಾಧಿಕಾರಿ ಡಾ.ನಾಗೇಶ್‌. ಉದ್ಯಮಿ ಗಣೇಶ್‌ ಭಟ್‌ ಪಾರಿಜಾತ. ಮೈಲಾರೇಶ್ವರ ಯುವಕ ಮಂಡಲದ ನಾಗರಾಜ್‌ ದಫೇದಾರ್‌ ಇದ್ದರು. ಅವಿನಾಶ್‌ ಕಾಮತ್‌ ನಿರೂಪಿಸಿದರು.

Comments are closed.