ಕರಾವಳಿ

ಉಪ್ಪಿನಕುದ್ರು ಎಂಬಲ್ಲಿ ಉಪ್ಪುನೀರು ಹಾವಳಿಯಿಂದ ಕೃಷಿಭೂಮಿ ನಾಶ..!

Pinterest LinkedIn Tumblr

ಕುಂದಾಪುರ: ಮಳೆಗಾಲದಲ್ಲಿ ನೆರೆ ನೀರಿನ ಜೊತೆ ಹೋರಾಟ.. ಬೇಸಿಗೆಯಲ್ಲಿ ಹನಿ ನೀರಿಗೂ ತತ್ವಾರ. ಬೈಂದೂರು ತಾಲೂಕು ತಲ್ಲೂರು ಗ್ರಾಮ ಉಪ್ಪಿನಕುದ್ರು ಪ್ರದೇಶದ ದುಸ್ಥಿತಿಯಿದು.

ಉಪ್ಪುನೀರು ತಡೆಗಾಗಿಯೇ ಮಯ್ಯರಕೇರಿಯಲ್ಲಿ ಕಿಂಡಿ ಆಣೆಕಟ್ಟು ನಿರ್ಮಿಸಿದರೂ ಅದರ ನಿರ್ವಹಣೆ ಕೊರತೆಯಿಂದ ಊರಿಗೆ ಊರೇ ನೀರಿನ ಸಮಸ್ಯೆಯಿಂದ ಬಳಲುವಂತಾಗಿದ್ದು ಅಕ್ಷರಶಃ ಸತ್ಯ! ಉಪ್ಪುನೀರು ನುಗ್ಗುವುದರಿಂದ ಕುಡಿಯುವ ನೀರು ಕಿಲುಬಾದರೆ, ಕೃಷಿಭೂಮಿ ನಂಜೇರಿ ಫಲವತ್ತತೆ ಕಳೆಡುಕೊಂಡು ಕೈಬಿಡುವ ಹಂತಕ್ಕೆ ಬಂದಿದೆ. ಉಪ್ಪಿನಕುದ್ರು ಒಂದು ಸಾವಿರ ಮನೆ, ನಾಲ್ಕು ಸಾವಿರ ಜನ ವಸತಿ ಪ್ರದೇಶ. ಭತ್ತ ಪ್ರಮುಖ ಬೆಳೆಯಾಗಿದ್ದು, ಭತ್ತದ ಕಟಾವು ನಂತರ ಉದ್ದು ನೆಲಗಡಲೆ ಬೆಳೆಯುತ್ತಿದ್ದು, ಉಪ್ಪಿನಕುದ್ರು ನೆಲಗಡಲೆ ಫೇಮಸ್. ವಾಣಿಜ್ಯ ಕೃಷಿಯಾಗಿ ತೆಂಗು ಬೆಳೆಯುತ್ತಿದ್ದು, ಸಿಗಡಿ ಕೃಷಿಕರೂ ಇದ್ದಾರೆ.

ಉಪ್ಪಿನಕುದ್ರು ಪ್ರದೇಶದ ನೀರಿನ ಸಮಸ್ಯೆ ಇಂದು ನಿನ್ನೆಯದಲ್ಲ. ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಗ್ರಾಪಂ ಎರಡು ದಿನಕ್ಕೊಮ್ಮೆ ನಾಲ್ಕಾರು ಕೊಡ ನೀರು ಕೊಟ್ಟು ಕೈತೊಳೆದುಕೊಳ್ಳುತ್ತದೆ. ಚುನಾವಣೆ ಸಮಯದಲ್ಲಿ ನೀರಿನ ಸಮಸ್ಯೆ ಪರಿಹಾರ ಮಾಡದಿದ್ದರೆ ಮತದಾನ ಮಾಡೋದಿಲ್ಲ ಎಂದರೆ ಮತದಾನ ಮಾಡಿ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ನಂಬಿಸಿದವರು ಮತ್ತೆ ನಮ್ಮಲ್ಲಿಗೆ ಬರೋದಿಲ್ಲ. ಕಿಂಡಿ ಆಣೆಕಟ್ಟು ಗುತ್ತಿಗೆದಾರರ ಜೇಬು ತುಂಬಲು ದಾರಿ ಮಾಡಿಕೊಡುತ್ತಿದ್ದು, ಕಳೆದ ಬಾರಿ ನಾಲ್ಕು ಕಿಂಡಿಗೆ ಹಲಗೆ ಹಾಕಿ ಎರಡು ಲೋಡ್ ಮಣ್ಣು ಹಾಕಿದ್ದಕ್ಕೆ ೨.೭೦ ಲಕ್ಷ ಅನುದಾನ ಖರ್ಚುಮಾಡಲಾಗಿದೆ. ಸಮಯಕ್ಕೆ ಸರಿಯಾಗಿ ಕಿಂಡಿ ಆಣೆಕಟ್ಟು ಹಲಗೆ ಹಾಕಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡಬೇಕು.
– ಸಂತೋಷ ಐತಾಳ, ಕೃಷಿಕ, ಉಪ್ಪಿಕುದ್ರು ಮಯ್ಯರಕೇರಿ

ಉಪ್ಪುನೀರು ನುಗ್ಗಿ ಕೃಷಿ ಕೈಬಿಡುವ ಸ್ಥಿತಿ ಮುಟ್ಟಿದೆ. ಬೇಸಿಗೆಯಲ್ಲಿ ಯಾವ ಬಾವಿಯ ನೀರು ಶುದ್ಧವಾಗಿಲ್ಲ. ಗ್ರಾಪಂ ಕೊಡುವ ನೀರು ಯಾವುದಕ್ಕೂ ಸಾಲೋದಿಲ್ಲ. ಉಪ್ಪಿಕುದ್ರು ಪ್ರದೇಶಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜರೂರತ್ತಿದೆ. ಹಾಗೆ ಕಿಂಡಿ ಆಣೆಕಟ್ಟು ಹಲಗೆ ಕ್ರಮಬದ್ಧವಾಗಿ ಹಾಕಿ ತೆಗೆಯುವುದರಿಂದ ಉಪ್ಪುನೀರು ನುಗ್ಗುವುದು ತಪ್ಪಿ ಕೃಷಿ ಹಾಗೂ ಬಾವಿನೀರು ಉಪ್ಪಾಗುವುದು ತಪ್ಪಿ ನೀರಿನ ಸಮಸ್ಯೆ ಪರಿಹಾರ ಆಗುತ್ತದೆ. ಉಪ್ಪುನೀರು ನುಗ್ಗುವುದ ತಡೆಯದಿದ್ದರೆ ಕುಡಿಯುವ ನೀರು ಸಮಸ್ಯೆ ಜೊತೆ ಇಡೀ ಕೃಷಿ ಬಯಲು ನಂಜಾಗಿ ಭೂಮಿ ಸಾರಕಳೆದುಕೊಂಡು ಬರಡಾದರೆ ನಾವು ಇಲ್ಲಿಂದ ಗುಳೆ ಏಳಬೇಕಾಗುತ್ತದೆ. ನಿರಂತರ ಉಪ್ಪುನೀರು ನುಗ್ಗುವುದರಿಂದ ಬಾವಿಯಿದ್ದರೂ ನೀರು ಕುಡಿಯಲಾಗದೆ ಶುದ್ಧ ನೀರು ಎಲ್ಲಿ ಸಿಗುತ್ತದೆ ಎಂದು ಬೇಸಿಗೆಯಲ್ಲಿ ಹುಡುಕಿ ಹೊರಡುವ ಸ್ಥಿತಿ ಇದೆ.
– ಗಿರಿಜಾ ಮಯ್ಯ, ಹಿರಿಯ ಕೃಷಿ ಕುಟುಂಬದ ಮಹಿಳೆ, ಮಯ್ಯರಬೆಟ್ಟು ಉಪ್ಪಿನಕುದ್ರು.

ಉಪ್ಪಿನಕುದ್ರು ಮಯ್ಯರ ಕೇರಿ ಕಿಂಡಿ ಅಣೆಕಟ್ಟು ಸಮಸ್ಯೆ ಹಾಗೂ ಹಲಗೆ ಹಾಕದ ಬಗ್ಗೆ ಗ್ರಾಮ ಪಂಚಾಯಿತಿ ಮಾಹಿತಿ ಪಡೆದು ತಕ್ಷಣ ಹಲಗೆ ಹಾಕುವ ವ್ಯವಸ್ಥೆ ಮಾಡಲಾಗುತ್ತದೆ. ಮುಂದೆ ಹಲಗೆ ಹಾಕಿ ತೆಗೆಯುವುದ ಕ್ರಮಬದ್ಧ ಮಾಡಲಾಗುತ್ತದೆ.
-ನಾಗಲಿಂಗ ಹೆಚ್, ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಬೈಂದೂರು.

Comments are closed.