ಕರ್ನಾಟಕ

ಕುಮಾರಸ್ವಾಮಿ ಸರ್ಕಾರವನ್ನು ಉರುಳಿಸಿದ್ದು ನಾನೇ: ಸಿ.ಪಿ.ಯೋಗೇಶ್ವರ್​ ಆಡಿಯೋ

Pinterest LinkedIn Tumblr


ಬೆಂಗಳೂರು: ಎಚ್​.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್​ ಮತ್ತು ಜೆಡಿಎಸ್​ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದು ನಾನೇ ಎಂದು ಸಿ.ಪಿ.ಯೋಗೇಶ್ವರ್​ ಅವರ ಆಡಿಯೋ ವೈರಲ್​ ಆಗಿದೆ.

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಚನ್ನಪಟ್ಟಣದಲ್ಲಿ ಇತ್ತೀಚಿಗೆ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಡಿ.ಕೆ.ಶಿವಕುಮಾರ್​ ಮತ್ತು ಮಾಜಿ ಸಿಎಂ ಎಚ್​ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ ಯೋಗೇಶ್ವರ್​, ಕುಮಾರಸ್ವಾಮಿ ಏನೋ ಮಾಡ್ತಾನೆ ಅಂತ ಚುನಾವಣೆಯಲ್ಲಿ ಈ ತಾಲೂಕಿನ ಜನ ಗೆಲ್ಲಿಸಿದ್ರು. ಈಗ ಚನ್ನಪಟ್ಟಣ ಜನರ ಮಾನ ಮರ್ಯಾದೆಯನ್ನು ಬೀದಿಬೀದಿಯಲ್ಲಿ ಅವನು ಕಳೆಯುತ್ತಿದ್ದಾನೆ ಎಂದು ಏಕವಚನದಲ್ಲೇ ಕಿಡಿಕಾರಿದ ಯೋಗೇಶ್ವರ್​, ಜೋಡೆತ್ತುಗಳು ಬೇರೆ ಬೇರೆ ಆಗುತ್ತಿದ್ದಂತೆ ಆಡಳಿತದಲ್ಲಿ ಭಿನ್ನಾಭಿಪ್ರಾಯ ಬಂತು. ಇತ್ತ ನಾನೇನು ಮಾಡೋದು ನನ್ನನ್ನು ಅವರು ಸೋಲಿಸಿಬಿಟ್ಟರು. ಜನರಿಗೆ ಮುಖ ತೋರಿಸೋಕೆ ಆಗ್ದೆ ನಾನು ಹೋಗಿ ಬೆಂಗಳೂರು ಸೇರಿಕೊಂಡೆ. ಆಮೇಲೆ ಕೂತ್ಕೊಂಡು ನಾನು ಯೋಚನೆ ಮಾಡ್ದೆ, ಬರೀ ಚನ್ನಪಟ್ಟನ ರಾಜಕೀಯ ಮಾಡಿಕೊಂಡೇ ಕೂತುಕೊಂಡ್ರೆ ನಮ್ಮ ತಾಲೂಕಿನ ಜನರಿಗೆ ಅರ್ಥ ಆಗೋದಿಲ್ಲ, ಯೋಗೇಶ್ವರ್​ ಏನ್​ ಮಾಡ್ತಾನೆ ಅಂತ ಬೆಂಗಳೂರಿನಲ್ಲೇ ಕೂತ್ಕೊಂಡೇ ಸ್ಕೆಚ್ ಹಾಕಿ ಕುಮಾರಸ್ವಾಮಿಯನ್ನು ಅಧಿಕಾರದಿಂದ ಕೆಳಗಿಳಿಸ್ದೆ ಎನ್ನುವ ಮೂಲಕ ಸರ್ಕಾರವನ್ನು ಕೆಡವಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರದ ವೇಳೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್​ ಕಾರ್ಯಕ್ರಮವೊಂದು ನಡೆಯಿತು. ಆ ಕಾರ್ಯಕ್ರಮದಲ್ಲಿ ಡಿಕೆಶಿ ಸಹೋದರ ಸಂಸದ ಡಿ.ಕೆ.ಸುರೇಶ್​ ಮಾತನಾಡುತ್ತ, ‘ಯೋಗೇಶ್ವರ್​ ಯಾರು ಎಂದೇ ನನಗೆ ಗೊತ್ತಿಲ್ಲ’ ಎಂದಿದ್ದ. ಇರ್ಲಿ.. ಇರ್ಲಿ.. ಮಗ ನೋಡ್ತಾಯಿರು ಎಂದು ಅದಾದ ಎರಡು ತಿಂಗಳಿಗೇ ಅಧಿಕಾರ ತೆಗೆಸ್ದೆ. ಆಗ ಗೊತ್ತಾಯ್ತು ಡಿಕೆಶಿ ಅಣ್ತಮ್ಮನಿಗೆ ಮತ್ತು ದೇವೇಗೌಡ್ರ ಕುಟುಂಬಕ್ಕೆ ಯೋಗೇಶ್ವರ್​ ಅಂದ್ರೇನು ಎನ್ನುತ್ತ ಮಾತಿನಲ್ಲೇ ತಿವಿದಿದ್ದಾರೆ.

ದೇವೇಗೌಡರು ಮತ್ತು ಕುಮಾರಸ್ವಾಮಿ ಇಬ್ಬರೂ ಡಿ.ಕೆ.ಶಿವಕುಮಾರ್​ನನ್ನು ಜೈಲಿಗೆ ಹಾಕಿಸ್ತೀನಿ ಎಂದು ಹತ್ತಾರು ಬಾರಿ ಹೇಳಿದ್ದರು. ಪಾಪ ಅದರಂತೆ ಜೈಲಿಗೂ ಕಳಿಸಿಬಿಟ್ಟರು… ತತ್ವ ಸಿದ್ಧಾಂತದಲ್ಲಿ-ರಾಜಕೀಯ ನಡೆಯಲ್ಲೂ ಬದ್ಧವೈರಿಗಳಾದ ಡಿಕೆಶಿ ಮತ್ತು ಎಚ್​ಡಿಕೆ ಇಬ್ಬರೂ ನನ್ನನ್ನು ಸೋಲಿಸುವ ನಿಟ್ಟಿನಲ್ಲಿ ಕೈ ಜೋಡಿಸಿಕೊಂಡರು. ಇಬ್ಬರೂ ತಮ್ಮನ್ನು ವಿಧಾನಸೌಧದಲ್ಲಿ ಜೋಡೆತ್ತುಗಳು ಅಂದು ಕೊಂಡರು. ಈಗೆಲ್ಲಪ್ಪ ಆ ಜೋಡೆತ್ತುಗಳು? ಎಂದು ಲೇವಡಿ ಮಾಡಿದ್ದಾರೆ.

ತಾಲೂಕಿಗೆ ನೀರಾವರಿ ತಂದುಕೊಟ್ಟೆ, ಜನತೆ ನನ್ನ ಕೈಹಿಡಿಯುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆ. ಆದರೆ ನಾನು ಚುನಾವಣೆಯಲ್ಲಿ ಸೋತೆ. ಜನತೆಯ ತೀರ್ಪು ಇದು ಎಂದು ಒಪ್ಪಿಕೊಳ್ಳೋಣ ಅಂದುಕೊಂಡೆ, ಆದರೆ ನನ್ನ ಸೋಲಿಗೆ ಕಾರಣ ಡಿಕೆಶಿ ಮತ್ತು ಎಚ್​ಡಿಕೆ ಕುತಂತ್ರ ಹೆಣೆದದ್ದು. ನಾನು ಗೆದ್ದರೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಪ್ರಭಲವಾಗಿ ಕಟ್ಟುತ್ತೇನೆ ಎಂಬ ಭಯಕ್ಕೆ ನನ್ನ ವಿರುದ್ಧ ಪಿತೂರಿ ಮಾಡಿದರು ಎಂದು ಗಂಭೀರ ಆರೋಪ ಮಾಡಿದ ಯೋಗೇಶ್ವರ್​, ಪರಿಣಾಮ ಅಧಿಕಾರದಿಂದ ಕೆಳಗಿಳಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದ್ದಾಗಿ ಬೀಗಿದ್ದಾರೆ.

Comments are closed.